ಜೆಡಿಎಸ್‌ ಮುಗಿದ ಅಧ್ಯಾಯ: 10 ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ- ಎಂ.ಲಕ್ಷ್ಮಣ್ ಆಗ್ರಹ.

ಮೈಸೂರು,ಜುಲೈ,20,2023(www.justkannada.in): ಸ್ವೀಕರ್ ಮುಂದೆ ಗಲಾಟೆ ಮಾಡಿದ 10 ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.

ಮೈಸೂರು ನಗರದ ಕಾಂಗ್ರೆಸ್ ಕಚೇರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್,  ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗೆ ಕಳುಹಿಸಿದ್ದರಲ್ಲಿ ಯಾವ ತಪ್ಪಿಲ್ಲ. ಗೃಹ ಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗಬಾರದೆಂದು ಈ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಹತಾಶರಾಗಿ ಬಟ್ಟೆ ಬಿಚ್ಚಿಕೊಂಡು ಹೋರಾಡುತ್ತಿದ್ದಾರೆ ಜೆಡಿಎಸ್‌ ಕೆಲ ದಿನಗಳಲ್ಲಿ ಮೂರು ಹೋಳಾಗುತ್ತದೆ. ಜೆಡಿಎಸ್‌ ನ 9 ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ. ಜೆಡಿಎಸ್‌ ಮುಗಿದ ಅಧ್ಯಾಯ. ಯುಪಿಎ – ಎನ್ ಡಿಎ ಒಕ್ಕೂಟ ಇಬ್ಬರು ಜೆಡಿಎಸ್‌ ಅನ್ನು ಕರೆಯುತ್ತಿಲ್ಲ ಎಂದು ಲೇವಡಿ ಮಾಡಿದರು.

ಮೈಸೂರು – ಬೆಂಗಳೂರು ಹೆದ್ದಾರಿಗೆ ಪ್ರತಾಪ್ ಸಿಂಹ ಹೋದರೆ ಜನ ಹೊಡೆಯುತ್ತಾರೆ..

ಅವೈಜ್ಞಾನಿಕ ರಸ್ತೆ ಹಾಗೂ ದುಬಾರಿ ಟೋಲ್ ಕಾರಣ ಜನ ರೊಚ್ಚಿಗೆದ್ದಿದ್ದಾರೆ. ಮೈಸೂರು – ಬೆಂಗಳೂರು ಹೆದ್ದಾರಿಗೆ ಸಂಸದ ಪ್ರತಾಪ್ ಸಿಂಹ ಹೋದರೆ ಜನ ಹೊಡೆಯುತ್ತಾರೆ. ಕಾಂಗ್ರೆಸ್ ಗೆ ಬೈಯುವ ಕೆಲಸ ಬಿಟ್ಟರೆ ಪ್ರತಾಪ್ ಸಿಂಹ ಮತ್ತೆ ಯಾವ ಕೆಲಸ ಮಾಡಿಲ್ಲ. ಮೈಸೂರು ಕೊಡಗಿಗೆ ನಿಮ್ಮ ಕೊಡುಗೆ ಏನು? ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಅಂತಾ ಯತ್ನಾಳ್ ಕುಸಿದು ಬಿದ್ದಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಆಸ್ಪತ್ರೆ ಸೇರಿದ ಬಗ್ಗೆ ವ್ಯಂಗ್ಯವಾಡಿದ  ಕೆಪಿಸಿಸಿ ವಕ್ತಾರ ಎಂ‌. ಲಕ್ಷ್ಮಣ್, ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಅಂತಾ ಯತ್ನಾಳ್ ಕುಸಿದು ಬಿದ್ದಿದ್ದಾರೆ. ಯತ್ನಾಳ್ ನೋಡೋಕೆ ಸಿಎಂ ಸಮೇತ ಎಲ್ಲರೂ ಹೋಗ್ತಿದ್ದಾರೆ. ಇನ್ನೂ ಮೂರು ದಿನ ಬರೀ ಇವರನ್ನು ನೋಡೋದೆ ನಡೆಯುತ್ತದೆ ಎಂದು  ಕಿಚಾಯಿಸಿದರು.

ಶಂಕಿತ ಭಯೋತ್ಪಾದಕರನ್ನು ಬಂಧಿಸಿದಕ್ಕೆ ಅಭಿನಂದನೆ.

ಶಂಕಿತ ಭಯೋತ್ಪಾದಕರನ್ನು ಬಂಧಿಸಿದಕ್ಕೆ  ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಗೆ ಅಭಿನಂದನೆ ಸಲ್ಲಿಸುತ್ತೇನೆ.  ಬಂಧಿತರು ರೌಡಿಶೀಟರ್‌ ಗಳಾಗಿದ್ದವರು. ಬಿಜೆಪಿ ಅವಧಿಯಲ್ಲಿ ಹೆಚ್ಚು ರೌಡಿಶೀಟರ್‌ ಗಳ ಹೆಸರು ಕೈ ಬಿಡಲಾಗಿತ್ತು. ಯಾವ ಕಾರಣಕ್ಕೆ ಹೆಸರು ಕೈ ಬಿಡಲಾಗಿತ್ತು ? ಎಂದು ಪ್ರಶ್ನಿಸಿದರು.

ಸದನದಲ್ಲಿರುವವರೆಲ್ಲಾ ಬಹುತೇಕ ರೌಡಿಗಳೇ. ನಿನ್ನೆ ಅವರ ನಡವಳಿಕೆ ನೋಡಿದರೆ ಗೊತ್ತಾಗುತ್ತದೆ. ರೌಡಿಗಳಿಗಿಂತ ಹೆಚ್ಚಾಗಿ ನಡೆದುಕೊಂಡಿದ್ದಾರೆ. ಟಿ ನರಸೀಪುರ ಘಟನೆ ಇನ್ನು ಮುಂದುವರಿಸಿದ್ದೀರಿ. ಇನ್ನೊಂದು ಕೊಲೆಯಾಗುವವರೆಗೂ ಮುಂದುವರಿಸುತ್ತೀರಾ ? ಎಂದು ಎಂ ಲಕ್ಣ್ಮಣ್ ಕಿಡಿಕಾರಿದರು.

Key words: Permanently -suspend -10 MLAs –session-kpcc-M. Laxman