ಮೂತ್ರ ವಿಸರ್ಜನೆಗೆಂದು ನಿಂತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾದ ದಷ್ಕರ್ಮಿಗಳು

ಬೆಂಗಳೂರು:ಆ-24:(www.justkannada.in) ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ಅತ್ತಿಗೆರೆ ರಸ್ತೆಯ ಬಳ್ಳೂರು ಗೇಟ್ ಬಳಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಆರ್ ಮುರಳಿ (41) ಎಂದು ಗುರುತಿಸಲಾಗಿದೆ. ಚಾಕು ಇರಿತ ಮತ್ತು ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಮುರಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಮೂಲದ ಮುರಳಿ ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆ ನೀಡಿರುವ ವಸತಿ ಗೃಹದಲ್ಲೇ ನೆಲೆಸಿರುವ ಅವರು, ವಾರಕ್ಕೊಮ್ಮೆ ಬೈಕ್‌ನಲ್ಲೇ ಕೃಷ್ಣಗಿರಿ ಜಿಲ್ಲೆಯ ತಮ್ಮ ಮನೆಗೆ ಹೋಗಿ ಬರುತ್ತಾರೆ. ಭಾನುವಾರ ರಾತ್ರಿ ಮನೆಗೆ ಹೋದವರು ವಾಪಸ್‌ ಬರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗಾಗಿ ಅತ್ತಿಬೆಲೆ ರಸ್ತೆಯ ಬಲ್ಲೂರು ಗೇಟ್‌ ಬಳಿ ಬೈಕ್‌ ನಿಲ್ಲಿಸಿದ್ದಾರೆ.

ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಮುರಳಿ ಅವರನ್ನು ಸುತ್ತುವರೆದು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದೀಯ ಎಂದು ಜಗಳ ತೆಗೆದಿದ್ದಾರೆ. ಬಳಿಕ ನಾಲ್ವರಲ್ಲಿ ಇಬ್ಬರು ಮುರಳಿ ಅವರನ್ನು ಹಿಂದಿನಿಂದ ಬಂಧಿಸಿ ಹಿಡಿದುಕೊಂಡು ಇನ್ನಿಬ್ಬರು ಚಾಕುವಿನಿಂದ ತಿವಿದು ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಜೇಬಿನಲ್ಲಿದ್ದ ಹಣ, ಮೊಬೈಲ್‌, ಪರ್ಸ್‌ ದರೋಡೆ ಮಾಡಿದ್ದಲ್ಲದೆ ಬೈಕನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮುರಳಿ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಪ್ರಕರನಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ಮೂತ್ರ ವಿಸರ್ಜನೆಗೆಂದು ನಿಂತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾದ ದಷ್ಕರ್ಮಿಗಳು
Peeing in open is invitation to danger in Bengaluru