ಮಕ್ಕಳಿಗೆ ವಿಕ್ರಮ  ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟು ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪೋಷಕರು.

ಯಾದಗಿರಿ,ಆಗಸ್ಟ್,26,2023(www.justkannada.in):  ಆಗಸ್ಟ್​ 23 ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುವ ಮೂಲಕ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ 3 ಬಾಹ್ಯಾಕಾಶ ಯೋಜನೆ ಸಫಲವಾಗಿದ್ದು, ಇದಕ್ಕೆ ವಿಶ್ವದೆಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.

ಈ ಮಧ್ಯೆ ನಾಡಿನ ಹಲವು ಆಸ್ಪತ್ರೆಗಳಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ  ಯಶಸ್ವಿ ಚಂದ್ರಯಾನ 3 ಯೋಜನೆಯ ಜಾತಕವನ್ನು ಆಧಾರವಾಗಿಟ್ಟುಕೊಂಡು ನಾಮಕರಣ ಮಾಡಲಾಗುತ್ತಿದೆ.

ಹೌದು ಯಾದಗಿರಿಯಲ್ಲಿ ಮಕ್ಕಳಿಗೆ ವಿಕ್ರಮ  ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ ಪೋಷಕರು.ಯಾದಗಿರಿಯ  ವಡಗೇರ ಪಟ್ಟಣದಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಒಂದೇ ಕುಟುಂಬದಲ್ಲಿ ಒಂದು ತಿಂಗಳ ಹಿಂದೆ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮತ್ತು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಕ್ಕಳಿವರು. ಯಾದಗಿರಿಯಲ್ಲಿ ಈ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ ಎಂಬ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮಗುವಿಗೆ ವಿಕ್ರಮ ಎಂದೂ, ಇನ್ನು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದೂ ನಾಮಕರಣ ಮಾಡಲಾಗಿದೆ.

ವಿಕ್ರಮ ಹೆಸರಿನ ಮಗು ಜನಿಸಿದ್ದು ಜುಲೈ 28 ರಂದು ಹಾಗೂ ಪ್ರಗ್ಯಾನ್ ಜನಿಸಿದ್ದು ಅಗಸ್ಟ್ 18 ರಂದು. ಅಗಸ್ಟ್ 24 ರಂದು ಈ ಎರಡೂ ಮಕ್ಕಳಿಗೆ ಕುಟುಂಬಸ್ಥರು ನಾಮಕರಣ ಮಾಡಿ ಈ ಮೂಲಕ ದೇಶಕ್ಕೆ ಮತ್ತು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

Key words: parents-congratulated- ISRO – naming – children- Vikrama – Pragyan.