ವಿಶ್ವ ಪಿಡುಗು- 2 : ಸೋಂಕಿತರ ಪೈಕಿ ಶೇಕಡಾ 10 ರಷ್ಷು ಮಂದಿಗೆ ಮಾತ್ರ ಆಮ್ಲಜನಕ ಬೇಕಾಗಬಹುದು.

 

ಬೆಂಗಳೂರು, ಮೇ 07, 2021 : (www.justkannada.in news) ಕರೋನಾ ಸೋಂಕಿಗೆ ಸಂಬಂಧಿಸಿದಂತೆ ವೈದ್ಯರಾದ ಡಾ. ವಿಷ್ಣು ಹಯಗ್ರೀವ ಅವರನ್ನು ಹಿರಿಯ ಪತ್ರಕರ್ತರಾದ ಆಶಾ ಕೃಷ್ಣಸ್ವಾಮಿ ಸಂದರ್ಶಿಸಿದಾಗ ಅವರ ಪ್ರತಿಕ್ರಿಯೆಗಳು ಹೀಗಿವೆ.

ಪ್ರ: ಸಾಮಾನ್ಯವಾಗಿ ಕೋವಿಡ್ ಪೀಡಿತ ರೋಗಿಗಳ ಚಿಕಿತ್ಸೆಗೆ ಎಷ್ಟು ವೆಚ್ಚ ತಗಲುತ್ತದೆ?

ಡಾ.ವಿಷ್ಣು: ಸರ್ಕಾರವು ಈಗಾಗಲೇ ಚಿಕಿತ್ಸಾ ದರದ ಶ್ರೇಣಿಯನ್ನು ನಿಗದಿಪಡಿಸಿದೆ. ಕೋವಿಡ್ ರೋಗಿಗಳಿಗೆ ದುಬಾರಿ ಔಷಧಗಳೇನೂ ಬೇಕಾಗಿಲ್ಲ. ಆಮ್ಲಜನಕದ ಸಿಲಿಂಡರುಗಳ ಕೊರತೆಯಿದೆ, ಏಕೆಂದರೆ ಯಾರೂ ಈ ರೀತಿಯ ಬೃಹತ್ ಸಮಸ್ಯೆಯನ್ನು ನಿರೀಕ್ಷಿಸಿರಲಿಲ್ಲ. ರೋಗಿಗಳು ತಮಗೆ ಆಮ್ಲಜನಕದ ಅಗತ್ಯವಿದೆ ಎಂದು ಅಂದುಕೊಂಡು ಗಾಬರಿಗೊಳಗಾಗುತ್ತಿದ್ದಾರೆ. ಸೋಂಕಿತರಾದವರಲ್ಲಿ ಕೇವಲ ಶೇಕಡಾ 10 ರಷ್ಷು ಮಂದಿಗೆ ಆಮ್ಲಜನಕ ಬೇಕಾಗಬಹುದು.

ಪ್ರಶ್ನೆ: ಈ ವೈರಾಣುವಿನ ಸೋಂಕಿನ ಪರಿಣಾಮವಾಗಿ ನಿಮ್ಮ ಎಷ್ಟು ಜನ ರೋಗಿಗಳು ಮರಣಹೊಂದಿದ್ದಾರೆ?

ಡಾ.ವಿಷ್ಣು: ಕಳೆದ ವರ್ಷ ಸುಮಾರು 40 ರಿಂದ 42 ರೋಗಿಗಳು. ಈ ವರ್ಷ ನಾನಿನ್ನೂ ಲೆಕ್ಕ ಹಾಕಬೇಕಾಗಿದೆ.

Pandemic Diary –Spirited & Sympathetic Doctor- Asha Krishnaswamy

ಪ್ರಶ್ನೆ: ಈ ಸಾಂಕ್ರಾಮಿಕ ಪಿಡುಗನ್ನು ನಿಭಾಯಿಸುವುದರಲ್ಲಿ ಭಾರತ ತೆಗೆದುಕೊಂಡ ಸರಿಯಾದ ಮತ್ತು ತಪ್ಪು ಕ್ರಮಗಳೇನು? ಈ ಪರಿಸ್ಥಿತಿ ಯನ್ನು ನಮ್ಮ ಮೇಲೇ ನಾವೇ ಹಾಕಿಕೊಂಡಿರುವುದೇ?

ವಿಷ್ಣು: ಭಾರತ, ವೈಜ್ಞಾನಿಕ ಸಮುದಾಯದ ಸಲಹೆಯನ್ನು ಸರಿಯಾಗಿಯೇ ಗ್ರಹಿಸಿದೆ. ಇದರಲ್ಲಿ ಯಾವುದೇ ಲೋಪಗಳಾಗಿಲ್ಲ. ಕೋವಿಡ್ ಇದೆ ಎಂಬುದನ್ನೇ ಮರೆತಾಗ ಎಲ್ಲವೂ ನಿಯಂತ್ರಣ ತಪ್ಪಿ ಹೋಯಿತು. ಅಂದರೆ ಜನ ಗುಂಪು ಸೇರುವುದನ್ನು ತಡೆಯಬೇಕಾಗಿತ್ತು. ಜಾತ್ರೆ, ಮೆರವಣಿಗೆಗಳಲ್ಲಿ ಜನ ಸೇರುವುದು, ಚುನಾವಣಾ ಪ್ರಚಾರಕ್ಕಾಗಿ ಜನ ಗುಂಪುಗೂಡುವುದು, ಸಿನಿಮಾ ಪ್ರಚಾರಕ್ಕಾಗಿ ಜನ ಸೇರುವುದು, ಸಿನಿಮಾ ಮಂದಿರಗಳನ್ನು ತೆರೆಯುವುದನ್ನು ಮತ್ತು ಮಾಲುಗಳು ತೆರೆಯುವುದನ್ನು ಮಾಡಬಾರದಿತ್ತು. ಬೇಸಿಗೆಯ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಹಳ ರಥೋತ್ಸವಗಳು ನಡೆದವು. ಅವುಗಳಿಗೆ ಅವಕಾಶ ನೀಡಬಾರದಿತ್ತು. ರಾಜಕೀಯ ನಾಯಕರು ತಮ್ಮ ಸ್ವಾರ್ಥ-ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಮಾಧ್ಯಮಗಳಲ್ಲಿ ವಿರೋಧಾಭಾಸದ ಹೇಳಿಕೆಗಳನ್ನು ನೀಡಿ ಮತ್ತಷ್ಟು ಗೊಂದಲವುಂಟಾಗಲು ಅವಕಾಶ ನೀಡುತ್ತಾರೆ.

jk

ಪ್ರಶ್ನೆ: ಈ ಸಾಂಕ್ರಾಮಿಕದ ಮೊದಲ ಹಂತದಲ್ಲಿ ನಾವೇನು ಕಲಿತೆವು?

ವಿಷ್ಣು: ಶಿಷ್ಟಾಚಾರ(protocol)ಕ್ಕೆ ಬದ್ಧರಾಗಿ ಇರುವುದರಿಂದ ನಾವು ಪರಿಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಕಂಡುಕೊಂಡೆವು. ಕಳೆದ ವರ್ಷ ನಾವು ರಕ್ತಹೆಪ್ಪುಗಟ್ಟಿದ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಆದರೆ, ಈ ಬಾರಿ ಅತ್ಯಲ್ಪ ಅವಧಿಯಲ್ಲೇ ಶ್ವಾಸಕೋಶಗಳು ಈ ರೋಗದ ದಾಳಿಗೆ ತುತ್ತಾಗುತ್ತಿವೆ. ಇಂತಹ ಪ್ರಕರಣಗಳನ್ನು ನಿಭಾಯಿಸಲು ನಾವು ಉತ್ತಮ ಸೌಲಭ್ಯಗಳನ್ನು ಹೊಂದಿದ್ದೇವೆ. ಆದರೆ ಮೂಲಭೂತ ಸೌಕರ್ಯಗಳು ಸೀಮಿತವಾಗಿರುವ ಪರಿಸ್ಥಿತಿಯಲ್ಲಿ, ಪ್ರಕರಣಗಳ ಸಂಖ್ಯೆ ಹೆಚ್ಚು ಆಗುತ್ತಿದೆ.

ಪ್ರಶ್ನೆ: ನಾವು ಪ್ರಕರಣಗಳನ್ನು ಮತ್ತು ಅಂಕಿಅಂಶಗಳನ್ನು ಸಂಶೋಧನೆ ಮಾಡಲು ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ದಾಖಲೀಕರಣ ಮಾಡುತ್ತಿದ್ದೆವೆಯೇ?

ವಿಷ್ಣು: ಹೌದು, ಮಾಡುತ್ತಿದ್ದೇವೆ. ನನ್ನಲ್ಲಿ ಇಂತಹ ನಾಲ್ಕು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿರುವುದು ಇವೆ. ಬಹಳಷ್ಟು ದಾಖಲೀಕರಣ ಮತ್ತು ಸಂಶೋಧನೆಯ ಕೆಲಸಗಳು ನಡೆಯುತ್ತಿವೆ. ಆದರೆ ಈಗಿನ ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ಇದಕ್ಕೆ ಯಾವುದಕ್ಕೂ ಸಮಯವೇ ಸಿಗುತ್ತಿಲ್ಲ.

ಪ್ರಶ್ನೆ: ಈ ಪರಿಸ್ಥಿತಿಯಿಂದ ನಾವು ಹೇಗೆ ಪಾರಾಗಬಹುದು?

ವಿಷ್ಣು: ರೋಗಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ. ಎಷ್ಟು ಸಾಧ್ಯವೋ ಅಷ್ಟು ಪ್ರತ್ಯೇಕವಾಸ ಮಾಡಿ. ಮಾಸ್ಕ್ ಧರಿಸಿ. ವೈದ್ಯರು ಸಲಹೆ ಮಾಡಿದಂತೆ ಧರಿಸಿದ ಮುಖಗವಸು ಶೇಕಡಾ 98 ರಷ್ಟು ರಕ್ಷಣೆಯನ್ನು ನೀಡಬಲ್ಲುದು. ಮುಂದಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ರೂಪಾಂತರಿ ವೈರಾಣುಗಳು ನಮ್ಮನ್ನು ಬಾಧಿಸಬಹುದು. ಈ ಹಂತದಲ್ಲಿ ಯಾರೂ ಸಹ ಊಹೆ ಮಾಡಿ ಏನಾಗುವುದೆಂದು ಹೇಳಲಾರರು. ಇದರೊಂದಿಗೆ ಬದುಕಲು ಕಲಿಯಬೇಕಾಗಿದೆ.

-ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು, ಬೆಂಗಳೂರು.
(ಕನ್ನಡಕ್ಕೆ: ಕೆ.ಪದ್ಮಾಕ್ಷಿ)

 

KEY WORDS : Pandemic Diary – Spirited & Sympathetic Doctor – Bangalore.