ಹಲ್ಕಿರಿದು ಮಾತನಾಡಿ ‘ಜನಪ್ರಿಯ’ರಾದ ಸದಾನಂದಗೌಡರೆ ಒಮ್ಮೆ ನೇರವಾಗಿ ಪಂಚರತ್ನ ಕಾರ್ಯಕ್ರಮ ನೋಡಬನ್ನಿ-ಜೆಡಿಎಸ್ ಟಾಂಗ್

ಬೆಂಗಳೂರು,ಫೆಬ್ರವರಿ,7,2023(www.justkannada.in): ‘ಪಂಚರತ್ನ’ ಯೋಜನೆಯು ಪಂಚರ್ ಆಗಿದೆ ಎಂದು ಟೀಕಿಸಿದ್ದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರಿಗೆ ಜೆಡಿಎಸ್ ಟ್ವಿಟ್ ಮಾಡಿ ಪಂಚ್ ಕೊಟ್ಟಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಕರುನಾಡಿನ ಸಮಗ್ರ ಏಳ್ಗೆಗಾಗಿ ಸಿದ್ದಪಡಿಸಿರುವ ‘ಪಂಚರತ್ನ’ ಯೋಜನೆಯು ಪಂಚರ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ‘ವಿಡಿಯೊಕಾಲ್’ ನಲ್ಲಿ ಏನನ್ನೋ ನೋಡಿ ಹಲ್ಕಿರಿದು ಮಾತನಾಡಿ ‘ಜನಪ್ರಿಯ’ರಾದ ಸದಾನಂದಗೌಡರೆ, ವರ್ಚುವಲ್ ಜಗತ್ತಿನಿಂದ ಮೊದಲು ಹೊರಬನ್ನಿ ಎಂದಿದೆ.

ಪಂಚರತ್ನ ಕಾರ್ಯಕ್ರಮವು ಈಗಾಗಲೇ ರಾಜ್ಯದ 6,700 ಕಿಲೋಮೀಟರ್ ಕ್ರಮಿಸಿದೆ. ಕಾರ್ಯಕ್ರಮ ನಡೆದಲ್ಲೆಲ್ಲ ನಮಗೆ ಸಿಗುತ್ತಿರುವ ಜನಸ್ಪಂದನೆ ನೋಡಿ,ರಾಜ್ಯ ಬಿಜೆಪಿ ಸರ್ಕಾರ ಪತರುಗುಟ್ಟಿದೆ. ‘ವಿಡಿಯೊ ಕಾಲ್’ನಲ್ಲಿ ಮುಳುಗುವ ಡಿವಿ ಸದಾನಂದಗೌಡರೆ, ಪಂಚರತ್ನ ಕಾರ್ಯಕ್ರಮವನ್ನು ಒಮ್ಮೆ ನೇರವಾಗಿ ನೋಡಬನ್ನಿ.ಆಗಲಾದರೂ,ಸತ್ಯ ಗೊತ್ತಾಗಲಿದೆ ಎಂದು ಆಹ್ವಾನ ನೀಡಿದೆ.

ನಾಡಿನ ಏಳ್ಗೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುವ ‘ಧಮ್ಮು-ತಾಕತ್ತು’ ನಿಮ್ಮ ಸರ್ಕಾರಕ್ಕಂತೂ ಇಲ್ಲ. ಪ್ರಧಾನಿ  ನರೇಂದ್ರ ಮೋದಿಯವರಿದ್ದರೆ ಸಾಕು ಎನ್ನುವ ಭ್ರಮೆಯಲ್ಲಿದ್ದೀರಿ. ಆದರೆ, ನಾವು ಹಾಗಲ್ಲ. ಹಿಂದೆ ಮಾಡಿದ ಕೆಲಸಗಳು, ಮುಂದೆ ಮಾಡಿಯೇ ತೀರುವ ಯೋಜನೆಗಳನ್ನು ಹೊತ್ತು ಜನತೆಯ ಬಳಿ ಹೊರಟಿದ್ದೇವೆ.

ಪಂಚರತ್ನ ಕಾರ್ಯಕ್ರಮವು, ಎರಡೂ ರಾಷ್ಟ್ರೀಯ ಹೈಕಮಾಂಡ್ ಪಕ್ಷಗಳ ನಿದ್ದೆಗೆಡಿಸಿರುವುದಂತು ಸುಳ್ಳಲ್ಲ. ರಾಜ್ಯ ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ‘ಪಂಚರ್’ ಮಾಡುವ ಮೂಲಕ, ಕೊಟ್ಟ ಆಶ್ವಾಸನೆಯ ಸಾಕಾರಕ್ಕಾಗಿ ಜನತೆ ನಮಗೆ ಆಶೀರ್ವಾದ ಮಾಡಲಿದ್ದಾರೆ. ‘ಪಂಚರ್’ ಎಂಬ ಪದದ ನಿಜ ಅರ್ಥ ತಮಗೆ ಆಗ ತಿಳಿಯಲಿದೆ ಎಂದು ಟಾಂಗ್ ನೀಡಿದೆ.

Key words: Pancharatna-program -DV Sadananda Gowda-JDS- Tong