ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಗೆ ವಿರೋಧಿಸಿ ಕೆಆರ್ ಎಸ್ ಬಳಿ ಪ್ರತಿಭಟನೆ.

ಮಂಡ್ಯ,ಮಾರ್ಚ್,5,2024(www.justkannada.in):   ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್  ವಿರೋಧಿಸಿ  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯದ ಬೃಂದಾವನ ಗೇಟ್ ಬಳಿ ರೈತಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್​​ ಗೆ ನಡೆಯಲಿದ್ದು, ಈ ಸಂಬಂಧ ಹೊರ ರಾಜ್ಯದಿಂದ ತಜ್ಞರ ತಂಡ ಆಗಮಿಸಿದೆ. ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಡ್ಯಾಂಗೆ ಹಾನಿಯಾಗುತ್ತದೆ ಎಂದು ಹಲವು ಹೋರಾಟಗಳು ನಡೆದ ಪರಿಣಾಮ  ಹಿಂದಿನ ಬಿಜೆಪಿ ಸರ್ಕಾರ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿತ್ತು. ಬೇಬಿ ಬೆಟ್ಟ ಸೇರಿದಂತೆ ಕೆಆರ್​ಎಸ್​ ಡ್ಯಾಂನ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿತ್ತು.

ಇದಾದ ಬಳಿಕ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬೇಕೋ ಬೇಡವೋ, ಬೇಬಿ ಬೆಟ್ಟದ ಗಣಿಗಾರಿಕೆಯಿಂಧ ಕೆಆರ್​ಎಸ್​ ಅಣೆಕಟ್ಟೆಗೆ ಹಾನಿಯಾಗುತ್ತಾ ಎಂದು ತಿಳಿಯಲು ಮಾಡುವ ಉದ್ದೇಶದಿಂದ ಹೈಕೋರ್ಟ್​ ಟ್ರಯಲ್​ ಬ್ಲಾಸ್ಟ್​ ನಡೆಸಲು ಆದೇಶ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಇಂದಿನಿಂದ 4 ದಿನ ಟ್ರಯಲ್​​ ಬ್ಲಾಸ್ಟ್​ ನಡೆಸಲಿದೆ.

ಹೀಗಾಗಿ ಕೆಆರ್ ಎಸ್ ಡ್ಯಾಮ್ ನ  ಬೃಂದಾವನ ಗೇಟ್  ಬಳಿ ರೈತ ಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಬೃಂದಾವನಕ್ಕೆ ನುಗ್ಗಲು ಯತ್ನಿಸಿದ್ದಾರೆ. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ  ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ  ರೈತ ಸಂಘಟನೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.

ಟ್ರಯಲ್ ಬ್ಲಾಸ್ಟ್ ಗೆ  ಆಗಮಿಸಿರುವ ತಜ್ಞರನ್ನು ವಾಪಸ್ ಕಳುಹಿಸಬೇಕು. ಈ ಟ್ರಯಲ್​ ಬ್ಲಾಸ್ಟ್​​ ಮಾಡುವಾಗ ಕಡಿಮೆ ಸ್ಫೋಟಕ ಬಳಸಿ ಬ್ಲಾಸ್ಟ್​​ ಮಾಡಿ ಕೆಆರ್​ ಎಸ್​ ಗೆ ತೊಂದರೆ ಆಗಲ್ಲ ಎಂದು ವರದಿ ನೀಡುತ್ತಾರೆ.  ಬಳಿಕ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಸಿ ಬ್ಲಾಸ್ಟ್​ ಮಾಡುತ್ತಾರೆ. ಇದರಿಂದ ಕೆಆರ್ ​ಎಸ್​ ಗೆ ಹಾನಿಯಾಗುತ್ತದೆ. ಹೀಗಾಗಿ ಟ್ರಯಲ್​ ಬ್ಲಾಸ್ಟ್​ ಮಾಡಬಾರದು ಎಂದು ರೈತ ಸಂಘ ಹಾಗೂ ಬಿಜೆಪಿ ಆಗ್ರಹಿಸಿದೆ.

Key words: Opposition – trail blast -Baby hills- Protest-near- KRS.