ಆಸ್ಪತ್ರೆಯಲ್ಲಿ ನರ್ಸ್ ಯಡವಟ್ಟು: 6 ತಿಂಗಳ ಮಗುವಿನ ಬೆರಳು ಕಟ್..!

ಬೆಂಗಳೂರು,ಫೆಬ್ರವರಿ,25,2026 (www.justkannada.in): ಆಸ್ಪತ್ರೆಯಲ್ಲಿ ನರ್ಸ್ ಯಡವಟ್ಟಿನಿಂದ ಬ್ಯಾಂಡೇಜ್ ತೆಗೆಯುವಾಗ 6 ತಿಂಗಳ ಮಗುವಿನ ಬೆರಳು ಕಟ್ ಆಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.  ಜ್ವರಕ್ಕಾಗಿ ದಾಖಲಾಗಿದ್ದ ಮಗುವಿನ ಬ್ಯಾಂಡೇಜ್ ತೆಗೆಯುವಾಗ ನರ್ಸ್ ಮಾಡಿದ ಯಡವಟ್ಟಿನಿಂದ ಮಗುವಿನ ಕೈ ಬೆರಳು ಕಟ್ ಆಗಿದೆ

ಜ್ವರದಿಂದ ಬಳಲುತ್ತಿದ್ದ ಮಗುವನ್ನು ಫೆಬ್ರವರಿ 19 ರಂದು ಪೋಷಕರು ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗಾಗಿ ವೈದ್ಯರು ಮಗುವಿನ ಕೈಗೆ ಡ್ರಿಪ್ ಹಾಕಿ ಬ್ಯಾಂಡೇಜ್ ಸುತ್ತಿರುವರು. ಮಗುವನ್ನು ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ಬ್ಯಾಂಡೇಜ್ ತೆಗೆಯುವಾಗ ನರ್ಸ್ ಅನಿತಾ ಎಂಬುವವರು ಕತ್ತರಿಯಿಂದ ಮಗುವಿನ ಕಿರುಬೆರಳನ್ನೇ ಕತ್ತರಿಸಿದ್ದಾರೆ ಎನ್ನಲಾಗಿದೆ.  ಇನ್ನು ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಗುವಿನ ಪೋಷಕರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನರ್ಸ್ ಅನಿತಾ ವಿರುದ್ಧ ಎಫ್‌ ಐಆರ್ ದಾಖಲಾಗಿದೆ.

Key words: Nurse, hospital, baby, finger, cut