ಅಭಿವೃದ್ಧಿ ಶೂನ್ಯ ವ್ಯಕ್ತಿಗಳಿಂದ ಸಿದ‍್ಧರಾಮಯ್ಯ ಅವರನ್ನ ಟೀಕಿಸುವ ನೈತಿಕ ಹಕ್ಕಿಲ್ಲ- ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿ

ಮೈಸೂರು,ಮೇ,20,2022(www.justkannada.in): ಅಭಿವೃದ್ಧಿ ಶೂನ್ಯವ್ಯಕ್ತಿಗಳಿಂದ ಅಭಿವೃದ್ಧಿಯ ಭಾಗ್ಯಗಳನ್ನು ಹರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಭಯಬೀತರಾಗಿರುವ ನಳಿನ್‌ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮಾಡಿರುವ ಸಾಧನೆಗಳು,ಅಭಿವೃದ್ಧಿ ಬಗ್ಗೆ ಯಾವುದೇ ಚರ್ಚೆಗೆ ಕಾಂಗ್ರೆಸ್ ಸಿದ್ಧವಿದೆ. ಅಭಿವೃದ್ಧಿ ಕೆಲಸಕ್ಕಿಂತ ಮಾತನಾಡಿಕೊಂಡು ಕಾಲ ಕಳೆಯುತ್ತಿರುವ ನಾಯಕರು  ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.  ಮೊದಲು ತಮ್ಮ ಅವಧಿಯಲ್ಲಿ ಆಗಿರುವ ಸಾಧನೆಗಳನ್ನು ಜನರ ಮುಂದಿಡಲಿ ಎಂದು ಹೆಚ್.ಎ ವೆಂಕಟೇಶ್ ಸವಾಲು ಹಾಕಿದ್ದಾರೆ.

ಡಿ.ದೇವರಾಜ ಅರಸು ನಂತರ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ನೀಡಿದ ಕೊಡುಗೆಗಳ ಬಗ್ಗೆ ಜಿಲ್ಲೆಯ ಜನರು ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶಾಶ್ವತವಾದ ಯೋಜನೆಗಳು ಒಂದಾದರೂ ಇದ್ದರೆ ತಿಳಿಸಬೇಕು. ನಳಿನ್‌ಕುಮಾರ್ ಕಟೀಲ್,ಶೋಭಾ, ಸಿ.ಟಿ. ರವಿ. ಪ್ರತಾಪ ಸಿಂಹ ಅವರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಭಯವಿದೆಯೇ ಹೊರತು ಕಾಂಗ್ರೆಸ್‌ ಗೆ ಭಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಪಿಎಸ್‌ ಐ ನೇಮಕಾತಿ ಅಕ್ರಮಗಳು ಭ್ರಷ್ಟಾಚಾರವನ್ನು ಬಯಲು ಮಾಡಿದೆ. ರಾಜ್ಯದಲ್ಲಿ ಖಾಲಿ ಇರುವ ಎಸ್‌ ಡಿಸಿ,ಎಫ್‌ ಡಿಸಿ, ಡಿ ಗ್ರೂಪ್ ಹುದ್ದೆಗಳನ್ನು ನೇಮಕ ಮಾಡಲು ಮುಂದಾಗದೆ ಹಣ ಮಾಡುವಂತಹ ಇಲಾಖೆಗಳ ಹುದ್ದೆಗಳನ್ನು ನೇಮಕ ಮಾಡುತ್ತಿದ್ದಾರೆ. ಪಿಎಸ್‌ ಐ ನೇಮಕಾತಿಯಲ್ಲಿ ಅನೇಕರು ಭಾಗಿಯಾಗಿರುವುದನ್ನು ಮರೆತಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಲೇವಡಿ ಮಾಡಿದರು.

ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಕಾಲದಲ್ಲಿ ನಡೆದಿರುವ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಗೊತ್ತಿದೆ. ನಗರದಲ್ಲಿ ಮಳೆ ಬಿದ್ದಾಗ ನೀರು ನುಗ್ಗುವುದನ್ನು ತಡೆಯಲು ಸಾಧ್ಯವಾಗದ ಬಿಜೆಪಿ ನಾಯಕರು ಬರೀ ಜನರಲ್ಲಿ ಸುಳ್ಳು ಹೇಳುತ್ತಿದ್ದಾರೆ. ಇಂತಹವರಿಂದ ಅಭಿವೃದ್ಧಿ ಬಗ್ಗೆ ಪಾಠ ಕಲಿಯಬೇಕಿಲ್ಲ ಎಂದರು.

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ಭೇಟಿ ಮಾಡುತ್ತಿರುವ ಸಚಿವರು ಸರ್ಕಾರಿ ನೌಕರರು, ಪದವೀಧರರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಸಚಿವರಾದ ಶೋಭಾ ಕರಂದ್ಲಾಜೆ, ಬಿ.ಸಿ.ಪಾಟೀಲ್, ಡಾ.ಸಿ.ಎನ್.ಅಶ್ವಥ್ ನಾರಾಯಣ್,ಎಸ್.ಟಿ.ಸೋಮಶೇಖರ್  ಅವರು ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಹಾಗಾಗಿ,ಮುಂದಿನ ದಿನಗಳಲ್ಲಿ ಸಚಿವರ ಭೇಟಿಯ ಬಗ್ಗೆ ಗಮನಹರಿಸಬೇಕು ಎಂದು ಹೆಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

Key words: no moral -right -criticize –Siddhavaramaiah-KPCC spokesperson -HA Venkatesh