ಎಸ್ ಐಟಿ ಮತ್ತು ಸರ್ಕಾರದ ಮೇಲೆ ನಂಬಿಕೆ ಇಲ್ಲ: ರಕ್ಷಣೆ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋದ ಸಿಡಿ ಸಂತ್ರಸ್ತೆ..

Promotion

ಬೆಂಗಳೂರು, ಮಾರ್ಚ್,29,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯು ರಕ್ಷಣೆ ಹಾಗೂ ನ್ಯಾಯವನ್ನು ಕೋರಿ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

 ಪತ್ರದ ಸಂಕ್ಷಿಪ್ತ ವಿವರ ಇಂತಿದೆ:

“ನಾನು ಅತ್ಯಾಚಾರ ಸಂತ್ರಸ್ತೆಯಾಗಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ ೩೫೪, ೫೦೬, ೫೦೪, ೩೭೬ (ಸಿ), ೪೧೭ ಜೊತೆಗೆ ಐ.ಟಿ ಕಾಯ್ದೆಯ ಕಲಂ ೬೭(ಎ)ರಡಿ ಎಫ್‌ಐಆರ್ (೩೦/೨೦೨೧) ಅನ್ನು ದಾಖಲಿಸಿರುತ್ತೇನೆ. ರಮೇಶ್ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಈ ಪ್ರಕರಣದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಎಂದು ಸಾರ್ವಜನಿಕವಾಗಿಯೇ ಸವಾಲು ಮಾಡಿರುತ್ತಾರೆ. ಹಾಗಾಗಿ ನಾನು ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಎಸ್‌ಐಟಿಯನ್ನು ಕೋರಿರುತ್ತೇನೆ. ಆದರೆ ಎಸ್‌ಐಟಿ ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ಮಾಧ್ಯಮ ವರದಿಗಳ ಮೂಲಕ ರಮೇಶ್ ಜಾರಕಿಹೊಳಿ ಅವರು ಮಾನ್ಯ ಮ್ಯಾಜಿಸ್ಟ್ರೇಟ್ ಅವರ ಮುಂದೆ ನಾನು ಹಾಜರಾಗದಿರುವಂತೆ ಮಾಡಲು ಹುನ್ನಾರ ಮಾಡಿ ಈಗಾಗಲೇ ತಮ್ಮ ಪ್ರಭಾವ ಬೀರಿ ಎಸ್‌ ಐಟಿಯ ಮೂಲಕ ನನ್ನ ಪೋಷಕರನ್ನು ಗಂಭೀರವಾಗಿ ಬೆದರಿಸಿರುವುದು ನನಗೆ ಮನವರಿಕೆಯಾಗಿದೆ. ತಮ್ಮ ಪ್ರಭಾವ ಬೀರಿ ಈಗಾಗಲೇ ಲಭ್ಯವಿರುವ ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ರಮೇಶ್ ಜಾರಕಿಹೊಳಿಯವರಿಂದ ನನ್ನ ಜೀವಕ್ಕೆ ಅಪಾಯವಿದ್ದು ನನ್ನನ್ನು ಯಾವ ಕ್ಷಣದಲ್ಲಿ ಬೇಕಾದರೂ ಕೊಲೆ ಮಾಡಿಸಬಹುದು ಹಾಗೂ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸುವ ಎಲ್ಲಾ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ಸಹ ರಮೇಶ್ ಜಾರಕಿಹೊಳಿಯವರ ಪರ ನಿಂತಿದ್ದು, ನಾನು ಈಗಾಗಲೇ ಸರ್ಕಾರ ಹಾಗೂ ಎಸ್‌ಐಟಿ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ನನ್ನನ್ನು ಯಾವ ಕ್ಷಣದಲ್ಲಿ ಬೇಕಾದರೂ ಕೊಲೆ ಮಾಡಿಸಿ, ಸಾಕ್ಷ್ಯಗಳನ್ನು ನಾಶಪಡಿಸಬಹುದಾಗಿರುತ್ತದೆ.Ramesh jarkiholi- CD case- girl-letter-High Court - protection

ಈ ಪ್ರಕರಣದಲ್ಲಿ ನಾನು ಸಂತ್ರಸ್ತೆಯಾಗಿದ್ದು, ನನ್ನ ಜೀವ ಹಾಗೂ ಮಾನ ಎರಡೂ ಬೆದರಿಕೆಯಲ್ಲಿದೆ. ನನ್ನ ಘನತೆಯನ್ನು ಕಾಪಾಡಿಕೊಳ್ಳಬೇಕಿದೆ. ನನ್ನ ಪೋಷಕರ ಮೇಲೆ ಒತ್ತಡ ಹೇರಿ ನನ್ನನ್ನು ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದು ಶುದ್ಧ ಸುಳ್ಳು. ನನ್ನ ಪೋಷಕರು ರಮೇಶ್ ಜಾರಕಿಹೊಳಿ ಅವರ ವಶದಲ್ಲಿದ್ದು, ಡಿವೈಎಸ್‌ಪಿ ಕಟ್ಟಿಮನಿ ಅವರು ರಮೇಶ್ ಜಾರಕಿಹೊಳಿ ಅವರ ಪರವಾಗಿ ನನ್ನ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಪ್ರಕರಣವನ್ನು ಈ ಕೂಡಲೇ ಕೈಗೆತ್ತಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೂ ಹಾಗೂ ನನಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹಾಗೂ ನನಗೆ ನ್ಯಾಯ ದೊರಕಿಸಿಕೊಡುವಂತೆ ತಮ್ಮಲ್ಲಿ ಅತ್ಯಂತ ಕಳಕಳಿಯಿಂದ ಕೋರುತ್ತಿದ್ದೇನೆ ಎಂದು ಸಿಡಿ ಸಂತ್ರಸ್ತ ಯುವತಿ ಮನವಿ ಮಾಡಿದ್ದಾರೆ.

Key words: Ramesh jarkiholi- CD case- girl-letter-High Court – protection