ಪ್ರೊ.ಕೃಷ್ಣೇಗೌಡರು ಹೇಳಿದ ಮುತ್ತುರಾಜನ ಮುತ್ತಿನಂತಹ ಕಥೆಗಳು…

Promotion

ಮೈಸೂರು, ಡಿಸೆಂಬರ್ 14, 2021 (www.justkannada.in): ನಗರದ ಜ್ವಾಲಾಮುಖಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಪ್ರತಿವರ್ಷ ಹೊರತರುವ ಡಾ.ರಾಜ್ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಾಗ್ಮಿ ಪ್ರೊ.ಕೃಷ್ಣೇಗೌಡ ಅವರು ಅಣ್ಣಾವ್ರ ಜೀವನದ ಹಲವಾರು ಘಟನೆಗಳನ್ನು ಮೆಲುಕು ಹಾಕಿದ್ದರು. ಆ ವಿಚಾರಗಳು ಇಲ್ಲಿವೆ…

ಕಲಾವಿದನಾದ ನನಗೆ ಜಾತಿಯಿಲ್ಲ ಎಂದಿದ್ದರು..
ಜೀವನ ಚೈತ್ರ ಸಿನಿಮಾದಲ್ಲಿ ರಾಜ್ ಕುಮಾರ್ ಅವರು ಈಚಲು ಮರ ಕಡಿಸುವ ಹಾಗೂ ಹೆಂಡದ ಅಂಗಡಿಯನ್ನು ಮುಚ್ಚಿಸುವ ದೃಶ್ಯವೊಂದಿದೆ. ಆದರೆ ಜಾತಿಯಲ್ಲಿ ಅವರು ಈಡಿಗರು. ಹೀಗಾಗಿ ಅವರ ಕುಲಬಾಂಧವರು ರಾಜ್ ಅವರ ಬಳಿಗೆ ಬಂದು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ, ನೀವೂ ಈಡಿಗರಾಗಿದ್ದು, ಈಚಲ ಮರ ಕಡಿಸುವುದು, ಹೆಂಡದ ಅಂಗಡಿ ಮುಚ್ಚಿಸುವ ದೃಶ್ಯದಲ್ಲಿ ಪಾಲ್ಗೊಂಡಿದ್ದೀರಿ. ನಿಮ್ಮ ಗಮನಕ್ಕೆ ಬಾರದೇ ಇದು ನಡೆದಿರಬಹುದು. ನೀವು ಈಡಿಗರಾಗಿ ಈ ರೀತಿ ಮಾಡುವುದು ಸರಿಯಲ್ಲ. ಚಿತ್ರದ ದೃಶ್ಯವನ್ನು ದಯವಿಟ್ಟು ತೆಗೆಸಬೇಕೆಂದು ಕೋರಿದ್ದರು. ಇದಕ್ಕೆ ಅಣ್ಣವ್ರ ಪ್ರತಿಕ್ರಿಯೆ ಈ ರೀತಿಯಿತ್ತು. “ನಾನು ಮನುಷ್ಯನಾಗಿದ್ದಾಗ, ಸಂಸಾರ, ವೈಯಕ್ತಿಕ ವಿಷಯ ಬಂದಾಗ ಈಡಿಗ. ಆದರೆ ಕಲೆ, ಸಿನಿಮಾ ವಿಷಯದಲ್ಲಿ ನಾನು ಯಾವ ಜಾತಿ, ಪಂಥಕ್ಕೂ ಸೇರಿದವನಲ್ಲ” ಎಂದು ಹೇಳಿದ್ದರು.

ನೀವು ಏಕಿಷ್ಟು ಒಳ್ಳೆಯವರಾದ್ರಿ…?!
ರಾಜ್ ಕುಮಾರ್ ಅವರಿಗೆ ಒಂದು ಪ್ರಶ್ನೆ ಬರುತ್ತದೆ. “ಅಣ್ಣ ನೀವು ಏಕೆ ಇಷ್ಟು ಒಳ್ಳೆಯವರಾದ್ರಿ?’ ಅದಕ್ಕೆ ಅಣ್ಣವ್ರ ಉತ್ತರ ಹೀಗಿತ್ತು… “ನಾನು ಸಾಕಷ್ಟು ಒಳ್ಳೆ ಪಾತ್ರಗಳನ್ನು ಮಾಡಬೇಕಿತ್ತು. ಇವುಗಳನ್ನು ಮಾಡಲು ಒಳ್ಳೆತನವನ್ನು ತುಂಬಿಕೊಳ್ಳಬೇಕಿತ್ತು. ಹೀಗಾಗಿ ಒಳ್ಳೆಯನಾಗಿರಬಹುದೆನೋ…” ಎಂದಿದ್ದರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ. ಈ ವೇಳೆ ಅಣ್ಣಾವ್ರ ಸೀತೆಯನ್ನು ಒಲಿಸಿಕೊಳ್ಳಲು ರಾವಣ ಮಾಡಿದ ಪ್ರಹಸನಗಳ ಕುರಿತ ಒಂದು ಕಥೆಯನ್ನು ಹೇಳಿದ್ದರು. ಸೀತೆಯನ್ನು ಒಲಿಸಿಕೊಳ್ಳಲು ರಾವಣ ಹಲವಾರು ವೇಷ ಧರಿಸಿ ಬರುತ್ತಾನೆ. ಆದರೆ ಸೀತೆ ಕಣ್ಣೆತ್ತಿಯೂ ಎದುರಿಗೆ ಬಂದವರ ನೋಡುವುದಿಲ್ಲ. ಕೊನೆಗೆ ರಾಮನೇ ನಾಚುವಂತೆ ರಾಮನ ವೇಷ ಧರಿಸಿದಾಗ ಸ್ವತಃ ವೇಷಧಾರಿ ರಾಮನೇ ಸೀತೆಯನ್ನು ಕಣ್ಣೆತ್ತಿ ನೋಡಲು ಆಗಲಿಲ್ಲ. ಹೀಗೆ ನಮ್ಮೊಳಗೆ ನಮಗೇ ಗೊತ್ತಿಲ್ಲದಂತೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ” ಎಂದು ಅಣ್ಣಾವ್ರು ಹೇಳಿದ್ದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನನಗೇಕೆ ಕೊಟ್ರು…?
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ರಾಜ್ ಕುಮಾರ್ ಅವರ ಪ್ರತಿಕ್ರಿಯೆ ಅಚ್ಚರಿ ಹಾಗೂ ಅವರ ಸರಳತೆಗೆ ಸಾಕ್ಷಿಯಾಗಿತ್ತು ಎಂಬ ನೆನಪನ್ನು ಕೃಷ್ಣೇಗೌಡರು ಸ್ಮರಿಸಿದರು. ಪ್ರಶಸ್ತಿ ಬಂದ ವೇಳೆ ಚಿತ್ರೀಕರಣದಲ್ಲಿದ್ದ ರಾಜ್ ಅವರಿಗೆ ಶಿವರಾಜ್ ಕುಮಾರ್ ಕರೆ ಮಾಡಿ ದಾದಾ ಸಾಹೇಬ್ ಪ್ರಶಸ್ತಿ ಬಂದ ವಿಷಯ ತಿಳಿಸಿದ್ದರು. ಆದರೆ ಇದಕ್ಕೆ ಅವರು ಹೌದಾ? ಅದು ಬಂದು ಬಂತ ಸರಿ ಎಂದಷ್ಟೇ ಹೇಳಿದ್ದರು. ಆದರೆ ಇದು ಬಲು ದೊಡ್ಡ ಪ್ರಶಸ್ತಿ, ದೇಶದಲ್ಲಿ ಸಾಕಷ್ಟು ಸೇವೆ ಮಾಡಿದವರಿಗೆ ಮಾತ್ರ ನೀಡುವುದು. ಅದು ನಿಮಗೆ ಬಂದಿದೆ ಎಂದು ಹೇಳಿದಾಗ. ಹಾಗಾದರೆ ಅದನ್ನು ನನಗೇಕೆ ಕೊಟ್ಟರು ಎಂದು ಪ್ರಶ್ನಿಸಿದ್ದ ಮುಗ್ದ, ಸರಳ ಜೀವಿ ಅಣ್ಣಾವ್ರು.

ಪ್ರಶಸ್ತಿಗಳ ಹಿಂದೆ ಹೋಗಲಿಲ್ಲ, ದ್ವೇಷ ಸಾಧಿಸಲಿಲ್ಲ ಅಣ್ಣಾವ್ರು…
ಭಾರತದಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡ ಚಿತ್ರಗಳಲ್ಲಿ ನಟಿಸಿದ ನಟ ಅಣ್ಣಾವ್ರು. ಅವರು ನಟಿಸಿದ್ದ ಶೇ.95ರಷ್ಷು ಚಿತ್ರಗಳು ಯಶಸ್ಸು ಕಂಡಿವೆ. ಇದಕ್ಕೆ ಯಾವ ಲಾಬಿಯೂ ಇರಲಿಲ್ಲ. ಮೊದಲ ಚಿತ್ರದಲ್ಲೇ ಪ್ರಶಸ್ತಿ ಪಡೆದ ಸಾಕಷ್ಟು ನಟರಿದ್ದರು. ಆದರೆ ಯಾರ ಬಗ್ಗೆಯೂ ಅಣ್ಣಾವ್ರು ಮಾತನಾಡಲಿಲ್ಲ. ದ್ವೇಷ ಸಾಧಿಸಲಿಲ್ಲ ರಾಜ್ ಕುಮಾರ್ ಎಂದು ಕೃಷ್ಣೇಗೌಡ ಸ್ಮರಿಸಿದರು.

ಕನ್ನಡದ ಮೊದಲ ಬಣ್ಣದ ಚಿತ್ರಗಳಲ್ಲಿ ನಟಿಸುವ ಅವಕಾಶ ಮಿಸ್…
ಕನ್ನಡದ ಮೊದಲ ಕಲರ್ ಚಿತ್ರ ಅಮರ ಶಿಲ್ಪಿ ಜಕಣಾಚಾರಿ. ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ರಾಜ್ ಕುಮಾರ್ ಅವರು. ಚಿತ್ರಕ್ಕಾಗಿ ಮೇಕಪ್ ಮಾಡಿಕೊಂಡು ರೆಡಿಯಾಗಿದ್ದ ರಾಜ್ ಅವರಿಗೆ ಬಂದು ನೀವು ಈ ಚಿತ್ರದಿಂದ ನಿಮ್ಮನ್ನು ಕೈಬಿಡಲಾಗಿದೆ ಎಂದು ಹೇಳಿದ್ದರು. ಅಂದು ಕಣ್ಣೀರು ಹಾಕಿದ್ದ ರಾಜ್ ಕುಮಾರ್ ಯಾರ ಬಗ್ಗೆಯೂ ದೂರಲಿಲ್ಲ. ಯಾರನ್ನೂ ದ್ವೇಷಿಸಲಿಲ್ಲ. ಮೊದಲ ಕನ್ನಡ ಚಿತ್ರದಲ್ಲಿ ನಟಿಸಿದ್ದ ಖ್ಯಾತಿ, ದಾಖಲೆ ರಾಜ್ ಕುಮಾರ್ ಅವರಿಗೆ ಸಿಗಬಾರದೆಂಬ ಕಾರಣಕ್ಕೆ ಮಾಡಿದ ಕುತಂತ್ರದ ಕುರಿತೂ ಅಣ್ಣಾವ್ರು ಪ್ರಶ್ನಿಸಿರಲಿಲ್ಲ.
ರಾಜ್ ಕುಮಾರ್ ಅವರ ಜತೆ ನಟಿಸುತ್ತಿದ್ದ ಮತ್ತಿಬ್ಬರು ನಟರಾದ ಕಲ್ಯಾಣ್ ಕುಮಾರ್ ಹಾಗೂ ಉದಯ್ ಕುಮಾರ್ ಅವರಿಗೆ ಸಾಕಷ್ಟು ಪ್ರತಿಭೆ ಇದ್ದರೂ ರಾಜ್ ಕುಮಾರ್ ಅವರ ಮಟ್ಟಕ್ಕೆ ಏರಲಿಲ್ಲ. ಅಂದು ಸಾಕಷ್ಟು ಖ್ಯಾತಿ ಗಳಿಸಿದ್ದರೂ ಅಣ್ಣವರ ಮಟ್ಟಕ್ಕೆ ತಲುಪಲಿಲ್ಲ. ಇದಕ್ಕೆ ರಾಜ್ ಕುಮಾರ್ ಅವರಷ್ಟು ಶ್ರದ್ಧೆ ಇಲ್ಲದಿರುವುದು ಕಾರಣವಾಗಿರಬಹುದು ಎಂದು ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಘದ ಚಂದ್ರಶೇಖರ್, ವಿಜಯ ಕುಮಾರ್, ಹೋಟೆಲ್ ವಿಶ್ವ, ರವಿ, ಜಗ್ಗಿ, ಮಂಜುನಾಥ್, ರಜನೀಶ್ ಬಾಬು, ಚೆಲುವರಾಜು, ದಿವಾಕರ್, ಅಶ್ವಥ್ ಇತರರು ಪಾಲ್ಗೊಂಡಿದ್ದರು.