ಮೊಬೈಲ್ ಕರೆನ್ಸಿ ರಿಚಾರ್ಜ್ ಹಾಗೂ ಯುಟಿಲಿಟಿ ಬಿಲ್ಲುಗಳ ಪಾವತಿಗೆ ಪ್ಲಾಟ್‌ ಫಾರಂ ಶುಲ್ಕವನ್ನು ವಿಧಿಸುತ್ತಿರುವ ಪೇಟಿಎಂ

ಬೆಂಗಳೂರು, ಜೂನ್ 14, 2022 (www.justkannada.in): ಪೇಟಿಎಂ (PayTM) ಗ್ರಾಹಕರು ಹಾಗೂ ವರ್ತಕರು ಇಬ್ಬರಲ್ಲಿಯೂ ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ವ್ಯಾಲೆಟ್ ಆ್ಯಪ್ ಆಗಿದೆ. ಇಂದು ಸಣ್ಣ ಕಿರಾಣಿ ಅಂಗಡಿಗಳಿಂದ ಹಿಡಿದು, ಬೇಕರಿಗಳು ಹಾಗೂ ರಸ್ತೆಬದಿಯ ಪುಟ್ಟ ಚಾಟ್ ಅಂಗಡಿಗಳವರೂ ಸಹ ಕ್ರಿಯಾಶೀಲ ಸ್ಪೀಕರ್ ಗ್ಯಾಡ್ಜೆಟ್ ಸಂಪರ್ಕವಿರುವ ಪೇಟಿಎಂ ಸಾಧನವನ್ನು ಬಳಸುತ್ತಿದ್ದಾರೆ. ಗ್ರಾಹಕರು ತಮ್ಮ ಖರೀದಿ ಮುಗಿದ ನಂತರ ಡಿಜಿಟಲ್ ಆ್ಯಪ್ ಮೂಲಕ ಹಣ ಪಾವತಿಸಿದರೆ ಸ್ಪೀಕರ್ ಸಾಧನದಲ್ಲಿ ವಹಿವಾಟು ಪೂರ್ಣಗೊಂಡಿದ್ದು, ಅಂಗಡಿ ಮಾಲೀಕರ ಖಾತೆಗೆ ನಿಖರವಾದ ಹಣ ತಲುಪಿರುವ ಕುರಿತು ಧ್ವನಿ ಮೂಲಕ ಖಾತ್ರಿಪಡಿಸುತ್ತದೆ. ತುಂಬಾ ಜನದಟ್ಟಣೆ ಇರುವ ಸಮಯದಲ್ಲಿ ವರ್ತಕರಿಗೆ ಈ ವಿಧಾನ ವರದಾನವಾಗಿ ಪರಿಣಮಿಸಿದೆ. ಹಾಗಾಗಿ ಇದು ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ.

ಬುಕ್‌ ಮೈಶೋ ಆ್ಯಪ್‌ ನಂತಲ್ಲದೆ, ಪೇಟಿಎಂ ಈ ಹಿಂದೆ ಆ್ಯಪ್ ಬಳಕೆದಾರರಿಗೆ ಡಿಜಿಟಲ್ ನಗದು ವಹಿವಾಟು ಪೂರ್ಣಗೊಳ್ಳಲು ಯಾವುದೇ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಈ ಹಿಂದೆ ಕೆಲವು ಡಿಜಿಟಲ್ ಕಂಪನಿಗಳು ಈ ರೀತಿ ಸೌಕರ್ಯ ಶುಲ್ಕಗಳನ್ನು ವಿಧಿಸಲು ಆರಂಭಿಸಲಿವೆ ಎಂಬ ವದಂತಿಗಳು ಹರಡಿತ್ತು. ಆದರೆ ಪೇಟಿಎಂ ತನ್ನ ಗ್ರಾಹಕರಿಗೆ ತನ್ನ ಡಿಜಿಟಲ್ ಹಣ ವಹಿವಾಟು ಸೇವೆಗೆ ಆ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಖಾತ್ರಿಪಡಿಸಿ ಗ್ರಾಹಕರಲ್ಲಿನ ಭಯವನ್ನು ಹೋಗಲಾಡಿಸಿತ್ತು. ಆದರೆ ಇದೀಗ ಪೇಟಿಎಂ ತನ್ನ ಮಾತನ್ನು ತಪ್ಪಿದೆ.

೨೦೧೯ರಲ್ಲಿ, ನಿಖರವಾಗಿ ಹೇಳುವುದಾದರೆ ಜುಲೈ ೧ರಂದು ಪೇಟಿಎಂ ಒಂದು ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು – “ಕಾರ್ಡ್ ಗಳು, ಯುಪಿಐ ಹಾಗೂ ವ್ಯಾಲೆಟ್ ಒಳಗೊಂಡಂತೆ ಗ್ರಾಹಕರು ಬಳಸುವ ಯಾವುದೇ ಡಿಜಿಟಲ್ ವಿಧಾನದ ಪಾವತಿಗೂ ಸಹ ಪೇಟಿಎಂ ಸೌಕರ್ಯ ಅಥವಾ ವಹಿವಾಟು ಶುಲ್ಕವನ್ನು ವಿಧಿಸುವುದಿಲ್ಲ,” ಎಂದು ತಿಳಿಸಿತ್ತು. ಅದಕ್ಕೆ ಬ್ಲಾಗ್ ವೆಬ್‌ ಪುಟಕ್ಕೆ ಸಂಪರ್ಕವಿರುವ ಯುಆರ್‌ಎಲ್ ಸಂಪರ್ಕ ವಿವರಗಳನ್ನೂ ನೀಡಿತ್ತು. ಆದರೆ ಅದು ಈಗ ಕೆಲಸ ಮಾಡುತ್ತಿಲ್ಲ.

ಆದರೆ ಇದೀಗ ಪೇಟಿಎಂ ಪ್ರತಿ ಮೊಬೈಲ್ ಕರೆನ್ಸಿ ರೀಚಾರ್ಜ್ ಗಳಿಗೆ ಹಾಗೂ ರೂ.೧೦೦ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವಿದ್ಯುತ್, ನೀರು ಹಾಗೂ ಗ್ಯಾಸ್ ಪಾವತಿಗಳಿಗೆ ಪ್ರತಿ ವಹಿವಾಟಿಗೆ ರೂ.೧ ರಿಂದ ರೂ.೬ರವರೆಗೆ ಶುಲ್ಕ ವಿಧಿಸಲಾರಂಭಿಸಿದೆ. ಇಲ್ಲಿ ಗಮನಿಸಬೇಕಾದ ಒಂದು ವಿಚಿತ್ರ ಸಂಗತಿ ಏನೆಂದರೆ ಈ ಶುಲ್ಕವನ್ನು ಪೇಟಿಎಂನ ಎಲ್ಲಾ ಬಳಕೆದಾರರಿಗೂ ಈ ಶುಲ್ಕ ವಿಧಿಸಲಾಗುತ್ತಿಲ್ಲ, ಬದಲಿಗೆ ಕೇವಲ ಕೆಲವೇ ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಪೇಟಿಎಂನ ಎಲ್ಲಾ ಬಳಕೆದಾರರಿಗೂ ಈ ಶುಲ್ಕ ಅನ್ವಯಿಸಬಹುದು.

ಈ ಕುರಿತು ಕೆಲವು ಬಳಕೆದಾರರು ಪೇಟಿಎಂ ವಿರುದ್ಧ ಟ್ವಿಟ್ಟರ್‌ ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Paytm- charges-platform-fees -payment -mobile -recharge -utility bills.