ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಗಲಿದೆ ಅಧಿಕಾರ ವಿಕೇಂದ್ರೀಕರಣ ; ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಘೋಷಣೆ

Promotion

ಮೈಸೂರು, ಆ.20, 2021 : (www.justkannada.in news) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದರ ಜತೆ ಜತೆಯಲ್ಲೇ ಶೈಕ್ಷಣಿಕ ವ್ಯವಸ್ಥೆಯ ಅಧಿಕಾರ ವಿಕೇಂದ್ರೀಕರಣ ಮಾಡಲು ಸರಕಾರ ಮುಂದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿರುವ ಕ್ರಾಫರ್ಡ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅನಾವರಣ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅತ್ಯುತ್ತಮವಾಗಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಸ್ವಾಯತ್ತತೆ ನೀಡುವುದರ ಜತೆಗೆ, ಗುಣಮಟ್ಟದ ಶಿಕ್ಷಣ ನೀಡಿಕೆಯಲ್ಲಿ ಆಯಾ ಸಂಸ್ಥೆಯನ್ನೇ ಉತ್ತರದಾಯಿಯನ್ನಾಗಿ ಮಾಡಲಾಗವುದು ಹಾಗೂ ಆಯಾ ಪ್ರದೇಶದ ನಾಗರಿಕರು, ಉದ್ದಿಮೆದಾರರು, ಹಳೆಯ ವಿದ್ಯಾರ್ಥಿಗಳು ಆಯಾ ಸಂಸ್ಥೆಗೆ ಶಕ್ತಿ ತುಂಬಬೇಕು ಎಂದು ಎಂದು ಸಚಿವರು ನುಡಿದರು.
ಶಿಕ್ಷಣ ಸಂಸ್ಥೆಗಳು ಸಮಾಜದ, ಜನರ ಆಸ್ತಿ. ಅವುಗಳನ್ನು ಜನರೇ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಜನರ ನೇತತ್ವದಲ್ಲಿಯೇ ನಾವು ಮುನ್ನಡೆಯಬೇಕು ಎಂದ ಅವರು, ಈಗಾಗಲೇ ಕೆಲ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮೂರನೇ ವಯಸ್ಸಿನಿಂದಲೇ ಕಲಿಕೆ:
ಈವರೆಗೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಗುವಿನ ಆರನೇ ವಯಸ್ಸಿನಿಂದ ಕಲಿಕೆ ಆರಂಭವಾಗುತ್ತಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಮೂರನೇ ವಯಸ್ಸಿನಿಂದಲೇ ಮಕ್ಕಳು ಕಲಿಯಲಾರಂಭಿಸುತ್ತಾರೆ. ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಿಸುತ್ತದೆ ಎಂದು ಸಚಿವರು ಹೇಳಿದರು.


ಮಕ್ಕಳ ಶೇ.80ರಷ್ಟು ವಿಕಾಸ ಆಗುವುದು 3ರಿಂದ 6ನೇ ವಯಸ್ಸಿನ ನಡುವೆಯೇ. ಅತಿ ಹೆಚ್ಚು ಕಲಿಕೆ ಸಾಧ್ಯವಾಗುವುದು, ಬಹು ಭಾಷೆಗಳನ್ನು ಕಲಿಯಲು ಸಾಧ್ಯ ಆಗುವುದು ಕೂಡ ಈ ವಯಸ್ಸಿನಲ್ಲಿಯೇ ಎಂದ ಸಚಿವರು; ಶೈಕ್ಷಣಿಕವಾಗಿ ಬದಲಾವಣೆ ಹಾಗೂ ದೇಶದ ಉನ್ನತಿಗೆ ಶಿಕ್ಷಣ ನೀತಿಯೊಂದೇ ರಾಜಮಾರ್ಗ ಎಂದರು.
ಸಾಮಾಜಿಕ ನ್ಯಾಯದ ಕಲ್ಪನೆ ಹಿನ್ನೆಲೆಯಲ್ಲಿ ನೋಡುವುದುದಾದರೆ ನೂತನ ಶಿಕ್ಷಣ ನೀತಿಯಲ್ಲಿ ಮಹತ್ವದ ಅಂಶಗಳಿವೆ. ಈವರೆಗೂ ಗುಣಮಟ್ಟದ ಶಿಕ್ಷಣ ಕೇವಲ ಉಳ್ಳವರು ಪಡೆಯಲು ಸಾಧ್ಯವಾಗುತ್ತಿತ್ತು. ಉತ್ತಮ ಸೌಲಭ್ಯಗಳುಳ್ಳ ಸಂಸ್ಥೆಗಳಿಗೆ ಬಡ ಮಕ್ಕಳು ಸೇರಲು ಆಗುತ್ತಿರಲಿಲ್ಲ. ಬಡಮಕ್ಕಳು ಸರಕಾರಿ ಶಾಲೆಗಳಲ್ಲೇ ಸೌಲಭ್ಯಗಳ ಕೊರತೆಯ ನಡುವೆಯೇ ವ್ಯಾಸಂಗ ಮಾಡಬೇಕಿತ್ತು. ಈ ಕೊರತೆ, ತಾರತಮ್ಯಗಳನ್ನು ನಿವಾರಿಸಿ ಪ್ರತಿಯೊಂದು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಜಾರಿಗೆ ಬಂದಿದ್ದೇ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಸಚಿವರು  ಹೇಳಿದರು.

ವಿದೇಶಕ್ಕೆ ಹೋಗಬೇಕಿಲ್ಲ:

ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ. ಬಹು ಆಯ್ಕೆಯ ಮತ್ತು ಬಹು ಶಿಸ್ತೀಯ ಕಲಿಕೆ ವಿದ್ಯಾರ್ಥಿಗಳಿಗೆ ಕಲಿಕೆಯ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತದೆ. ದೇಶವನ್ನು ಕಟ್ಟುವ ಎಲ್ಲ ರೀತಿಯ ಶಿಕ್ಷಣವೂ ಇನ್ನು ನಮ್ಮ ದೇಶದಲ್ಲೇ ಲಭ್ಯವಾಗಲಿದೆ. ಯಾರೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶಕ್ಕಾಗಿ ಹೋಗಬೇಕಿಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.

ಸೂತನ ಶಿಕ್ಷಣ ನೀತಿಯು ಬೋಧನೆ ಮತ್ತು ಕಲಿಕೆಯಲ್ಲಿ ಸಂಸ್ಕಾರವನ್ನು ಪ್ರತಿನಿಧಿಸುತ್ತದೆ. ಯಾವುದೇ ವಿಷಯವನ್ನು ಕಾಟಾಚಾರಕ್ಕೆ ಕಲಿಯಲು ಹೊಸ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಬದ್ಧತೆ ಮತ್ತು ಶ್ರದ್ಧೆಯಿಂದ ಪ್ರತಿ ವಿದ್ಯಾರ್ಥಿಯೂ ಕಲಿಯಬೇಕಾಗುತ್ತಿದೆ. ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ಶಿಕ್ಷಣ ನೀತಿ ಒದಗಿಸುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸದ ಪ್ರತಾಪ್ ಸಿಂಹ, ವಿವಿ ಕುಲಪತಿ ಪ್ರೊ.ಹೇಮಂತ ಕುಮಾರ್ ಮಾತನಾಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

key words : mysore-university-nep-debate-vc-mysore