ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿ ಹಾಗೂ ಹೊಸ ಸದಸ್ಯರ ನೋಂದಣಿ ಅವಧಿ ಜ.31ರವರೆಗೆ ವಿಸ್ತರಣೆ.

ಬೆಂಗಳೂರು,ಜನವರಿ,2,2023(www.justkannada.in): 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿ ಹಾಗೂ ಹೊಸ ಸದಸ್ಯರ ನೋಂದಾಯಿಸುವ ಅವಧಿಯನ್ನ ಜನವರಿ 31ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಆದೇಶಿಸಿರುವ  ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ ದಿವಾಕರ್,  2022-23ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 67 ರಲ್ಲಿ ಮಾನ್ಯ ಮುಖ್ಯಮಂತ್ರಿಯವರು ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೊಳಿಸಲು ಘೋಷಿಸಿದ್ದಾರೆ.

2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ:01-11-2022 ರಿಂದ 31-12-2022 ರವರೆಗೆ ನಿಗದಿಗೊಳಿಸಿ ಆದೇಶಿಸಲಾಗಿತ್ತು.

ಮುಖ್ಯಕಾರ್ಯನಿರ್ವಹಣಾಧಿಕಾರಿ, ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಇವರ ಟಿಪ್ಪಣಿ ದಿನಾಂಕ:31-12-2022 ರಲ್ಲಿ ಸರ್ಕಾರವು ಯಶಸ್ವಿನಿ ಯೋಜನೆಯ ಸದಸ್ಯತ್ವ ನೋಂದಣಿ ದಿನಾಂಕದ ಅವಧಿಯನ್ನು ದಿನಾಂಕ:31-12-2022ರ ವರೆಗೆ ನಿಗದಿಪಡಿಸಿದ್ದು, ಈ ಅವಧಿಯಲ್ಲಿ ಅರ್ಹವಿರುವ ಎಲ್ಲಾ ಸದಸ್ಯರನ್ನು ನೋಂದಾಯಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳು ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಕೋರಿರುವುದಾಗಿ ತಿಳಿಸಿದ್ದಾರೆ. ಯೋಜನೆಗೆ ನಿಗಧಿಪಡಿಸಿರುವ 30 ಲಕ್ಷಗಳ ನೋಂದಣಿ ಗುರಿಯನ್ನು ಸಾಧಿಸಲು ನೋಂದಣಿ ದಿನಾಂಕದ ಅವಧಿಯನ್ನು ವಿಸ್ತರಿಸುವುದು ಸಮಂಜಸವೆಂದು ತಿಳಿಸುತ್ತಾ, ಸದಸ್ಯತ್ವ ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಪ್ರಸ್ತಾವನ ಸಲ್ಲಿಸಿದ್ದರು.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ: 31-01-2023 ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Key words: Implementation – Yashasvini Arogya Yojana- extension – registration – new members