ಸರಕಾರದ ಕೋವಿಡ್ ಪರಿಹಾರದ ಚೆಕ್ ಬೌನ್ಸ್..!

Promotion

 ಬೆಂಗಳೂರು, ಜನವರಿ 21, 2022(www.justkannada.in): ಉತ್ತರ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಕೆಲವು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಕೋವಿಡ್-೧೯ ಸಂತ್ರಸ್ತರ ಕುಟುಂಬಗಳ ಸದಸ್ಯರು ರಾಜ್ಯ ಸರ್ಕಾರ ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ವಿತರಿಸಿರುವ ರೂ.೧ ಲಕ್ಷ ಪರಿಹಾರದ ಚೆಕ್‌ಗಳು ಬೌನ್ಸ್ ಆಗಿರುವ ಕುರಿತು ಆರೋಪಿಸಿದ್ದಾರೆ.

ಈ ಕುಟುಂಬಗಳ ಸದಸ್ಯರು ತಿಳಿಸಿರುವಂತೆ ಬ್ಯಾಂಕ್‌ ನ ಸಿಬ್ಬಂದಿಗಳು ಹಲವು ಕಾರಣಗಳನ್ನು ನೀಡಿದ್ದು, ಇದರಿಂದಾಗಿ ಪರಿಹಾರದ ಮೊತ್ತ ಪಡೆಯಲು ಹರಸಾಹಸ ಪಡುವಂತಾಗಿದೆ.ಈ ಕುರಿತು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೋವಿಡ್-೧೯ರ ಪರಿಹಾರದ ಚೆಕ್‌ ಗಳು ಬೌನ್ಸ್ ಆಗಿರುವ ಕುರಿತು ತಮಗೆ ವರದಿಗಳು ಬಂದಿರುವುದಾಗಿ ತಿಳಿಸಿ, ಈ ಸಂಬಂಧ ಕೂಡಲೇ ತಪ್ಪನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. “ಯಾದಗಿರಿ ಜಿಲ್ಲೆಯಿಂದ ಇಂತಹ ಪ್ರಕರಣಗಳು ವರದಿಯಾಗಿವೆ. ನಾನು ಕೂಡಲೇ ಪರಿಹಾರದ ಹಣವನ್ನು ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ,” ಎಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.ಡಿಸೆಂಬರ್ ೧೭, ೨೦೨೧ರಂದು ಶೋರಾಪುರದ ಎಂಎಲ್‌ಎ ನರಸಿಂಹ ನಾಯಕ್ (ರಾಜುಗೌಡ) ಅವರು ಕೋವಿಡ್-೧೯ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಚೆಕ್‌ಗಳನ್ನು ಹಸ್ತಾಂತರಿಸಿದ್ದರು.

ಈ ಸಂಬಂಧ ಮಾತನಾಡಿರುವ ನಾಯಕ್ ಅವರು, “ಸಂತ್ರಸ್ತರ ಕುಟುಂಬಗಳ ಸದಸ್ಯರು ಈ ಸಮಸ್ಯೆಯನ್ನು ಗುರುವಾರದಂದು ನನ್ನ ಗಮನಕ್ಕೆ ತಂದರು. ನಾನು ಸಮಸ್ಯೆಯನ್ನು ಪರಿಶೀಲಿಸುವಂತೆಯೂ ಹಾಗೂ ಕೂಡಲೇ ಪರಿಹಾರದ ಮೊತ್ತ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇದು ನಮ್ಮ ಸರ್ಕಾರಕ್ಕೆ ಆಗಿರುವ ದೊಡ್ಡ ಇರುಸುಮುರುಸು,” ಎಂದಿದ್ದಾರೆ.ಕಳೆದ ವರ್ಷ ಕೋವಿಡ್‌ನಿಂದಾಗಿ ಮೃತಪಟ್ಟ ಬಸನಗೌಡ ಎಂಬುವವರ ಪುತ್ರಿ ಅನಿತಾ ಅವರು, ಎಂಎಲ್‌ಎ ನಾಯಕ್ ಅವರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರಿಹಾರದ ಚೆಕ್ ಅನ್ನು ಪಡೆದುಕೊಂಡಿದ್ದರು. “ನಾನು ಆ ಚೆಕ್ ಅನ್ನು ನಮ್ಮ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿ, ಹಣ ವರ್ಗಾವಣೆ ಆಗಲು ಕಾಯುತ್ತಿದ್ದೆ. ಈ ಸಂಬಂಧ ವಿಚಾರಿಸಲು ಬ್ಯಾಂಕ್‌ಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು ಎಸ್‌ಬಿಐ ಅನ್ನು ಸಂಪರ್ಕಿಸುವಂತೆ ಸೂಚಿಸಿದರು,” ಎಂದು ವಿವರಿಸಿದರು.

ಯಾದಗಿರಿಯ ಎಸ್‌ಬಿಐ ಶಾಖೆಯ ಅಧಿಕಾರಿಗಳೂ ಅನಿತಾಗೆ ಚೆಕ್‌ಗೆ ಸಂಬಂಧಪಟ್ಟ ವಿವರಗಳನ್ನು ನೀಡಲು ವಿಫಲರಾಗಿದ್ದಾರೆ. “ಕೆಲವು ದಿನಗಳ ನಂತರ ನನಗೆ ಒಂದು ಚೆಕ್ ಬಂತು. ಅದರಲ್ಲಿ ‘ಇತರೆ ಕಾರಣಗಳಿಂದಾಗಿ’ ಚೆಕ್ ಬೌನ್ಸ್ ಆಗಿರುವುದಾಗಿ ತಿಳಿಸಿತ್ತು,” ಎಂದು ಅನಿತಾ ತಿಳಿಸಿದ್ದಾರೆ.ಇದು ಅನಿತಾಗೆ ಆಗಿರುವ ಘಟನೆ ಮಾತ್ರವಲ್ಲ. ಕೋವಿಡ್‌ನಿಂದ ಮೃತಪಟ್ಟ ಮಹಾದೇವಿ ಎಂಬುವವರ ಸಂಬಂಧಿ ಹನುಮಂತೂಗೂ ಸಹ ಇದೇ ರೀತಿ ಅನುಭವವಾಗಿದೆ. “ನಾವು ಚೆಕ್ ಏಕೆ ಬೌನ್ಸ್ ಆಯಿತು ಎಂದು ನಾವು ಬ್ಯಾಂಕ್‌ ನ ಅಧಿಕಾರಿಗಳನ್ನು ಕೇಳುತ್ತಲೇ ಇದ್ದೇವೆ, ಆದರೆ ಅವರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಈಗ ನಮಗೆ ಹಣ ಎಲ್ಲಿಂದ ಪಡೆಯುವುದು ಎಂದು ಗೊತ್ತಾಗುತ್ತಿಲ್ಲ. ಬ್ಯಾಂಕ್ ಹಾಗೂ ತಾಲ್ಲೂಕಿನ ಅಧಿಕಾರಿಗಳು ನೆರವಾಗುತ್ತಿಲ್ಲ,” ಎಂದರು.ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು, ಕೋವಿಡ್ ಸಾಂಕ್ರಾಮಿಕದಿಂದಾಗಿ ಬಿಪಿಎಲ್ ಕುಟುಂಬಗಳಲ್ಲಿ ಆದಾಯ ಗಳಿಸುತ್ತಿದ್ದಂತಹ ವ್ಯಕ್ತಿ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ರೂ.೧ ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Government- covid-compensation –check- bounce.