ರೈತರಿಗೆ ನ್ಯಾನೋ ಯೂರಿಯಾ ಬಗ್ಗೆ ಅರಿವು ಮೂಡಿಸಬೇಕು- ಸಚಿವ ಬಿ.ಸಿ.ಪಾಟೀಲ್.

ಮೈಸೂರು. ಜುಲೈ 5,2022(www.justkannada.in): ನಾಟಿ ಪದ್ಧತಿಯಿಂದ ಹೆಚ್ಚು ಇಳುವರಿ ಬರುವುದರಿಂದ ರೈತರಿಗೆ ನಾಟಿ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೆ ಯೂರಿಯಾ ಮತ್ತು ಗೊಬ್ಬರಗಳ ಬಳಕೆಯಂತೆ ನ್ಯಾನೋ ಯೂರಿಯಾ ಬಳಕೆಯ ಬಗ್ಗೆಯೂ ತಿಳಿಸಿಕೊಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್‌ ನ ಅಬ್ದುಲ್ ನಜೀರ್‌ ಸಾಬ್ ಸಭಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕುರಿತು ಮಾತನಾಡಿದ ಅವರು,  ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯದ ಕೃಷಿ ಕುರಿತು ಮಾತನಾಡಿದರು.

ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಬೀಳುವುದು ಬೆಳಗಾವಿಯಲ್ಲಿ. ಆದರೂ ಅಲ್ಲಿ ಸೋಯಾಬೀನ್ ಅನ್ನು ಬೆಳೆಯಲಾಗುತ್ತದೆ ಅಂದರೆ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಸಹ ಸೋಯಾಬೀನ್ ಮತ್ತು ಸೂರ್ಯಕಾಂತಿಯನ್ನು ಬೆಳೆಯಬಹುದಾಗಿದ್ದು, ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

2022ರ ಮುಂಗಾರು ಹಂಗಾಮಿನಲ್ಲಿ 82.67 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಇದ್ದು, ಇದುವರೆಗೂ 36.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. 2022-23 ರ ಸಾಲಿನ ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ವಿವಿಧ ಗ್ರೇಡ್‌ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ. 2022ರ ಜುಲೈ 4ರ ಅಂತ್ಯಕ್ಕೆ 11.91 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ರಸಗೊಬ್ಬರ ಸರಬರಾಜಾಗಿದ್ದು, 17.85 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿನಲ್ಲಿ 11.44 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ರಸಗೊಬ್ಬರ ಮಾರಾಟವಾಗಿದೆ ಎಂದು ತಿಳಿಸಿದರು.

ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಕೈಗೆಟುಕುವಂತೆ ಮಾಡಲು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಈಗಾಗಲೇ ಸ್ಥಾಪಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ರಾಜ್ಯದ ಎಲ್ಲ ಹೋಬಳಿಗಳಿಗೆ ವಿಸ್ತರಿಸಲಾಗುವುದು. 2022-23 ನೇ ಸಾಲಿನಲ್ಲಿ 30 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದ್ದು, ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಇದು ಸಹಕಾರಿಯಾಗಲಿದ್ದು, 2022-23 ನೇ ಸಾಲಿನ ಆಯವ್ಯಯದಲ್ಲಿ 5 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಎಲ್ಲಾ ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯಗಳ ಮುಖಾಂತರ ತಲಾ 1000 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ, ಜೈವಿಕ ವಿಶ್ಲೇಷಣೆ ಅಧ್ಯಯನಗಳನ್ನು ಕೈಗೊಂಡು ರೈತರ ಹೊಲಗಳಿಗೆ ವಿಸ್ತರಿಸಲಾಗುವುದು. ರಾಜ್ಯದಲ್ಲಿ ಒಟ್ಟಾರೆ 2 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಯಡಿ ತರಲಾಗಿದ್ದು, ರಾಷ್ಟ್ರದಲ್ಲಿಯೇ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ನಮ್ಮ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಸದರಿ ಯೋಜನೆಗೆ 2022-23 ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನವನ್ನು ಕಲ್ಪಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.

ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

2022-23 ನೇ ಸಾಲಿಗೆ ಮುಖ್ಯಮಂತ್ರಿಗಳು 2022ರ ಮೇ 8ರಂದು 100 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನಗಳ ಲೋಕಾರ್ಪಣೆ ಗೊಳಿಸಿದ್ದು, ಕೀಟ ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶಗಳ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ, ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಶಿವಯೋಗಿ ಕಳಸದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Farmers – aware -about -Nano Urea-Minister -BC Patil.