ವಿವೇಕಾನಂದರ ಆಶಯಗಳಿಗೆ ಎನ್ ಇಪಿ ಪೂರಕ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಜನವರಿ,12,2022(www.justkannada.in):  ಯುವಜನರ ಉಜ್ಜ್ವಲ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣವೇ ಕೀಲಿಕೈ ಎನ್ನುವ ಸ್ವಾಮಿ ವಿವೇಕಾನಂದರ ತತ್ವದಲ್ಲಿ ವಿದ್ಯಾರ್ಥಿ ಸಮುದಾಯವು ನಂಬಿಕೆ ಇಟ್ಟುಕೊಂಡು, ಮುಂದಡಿ ಇಡಬೇಕು. ಇದಕ್ಕೆ ತಕ್ಕಂತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ದೇಶೀ ಮಾದರಿಯ ಪರಿಪೂರ್ಣ ಕಲಿಕೆಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹಿತವಚನ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಯಶವಂತಪುರ ವೃತ್ತದ ಸಮೀಪ ಮತ್ತು ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಅವರ ಪ್ರತಿಮೆಗೆ ಬುಧವಾರದಂದು ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯ ಗೌರವ ಸಲ್ಲಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಾಪು ಬಾಲಿಕಾ ಪದವಿಪೂರ್ವ ಕಾಲೇಜು ಮತ್ತು ಮಲ್ಲೇಶ್ವರಂ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

ಎನ್ ಇಪಿಯಲ್ಲಿ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಜೊತೆಗೆ ಯುವಜನರಿಗೆ ಆಧುನಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಯುವಕರ ಸಬಲೀಕರಣಕ್ಕಾಗಿಯೇ `ಎಲ್ಲರಿಗೂ ಉದ್ಯೋಗ ನೀತಿಯನ್ನು ಸರಕಾರ ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ವಿವೇಕಾನಂದರು ಸದಾ ಗುಣಮಟ್ಟದ ಶಿಕ್ಷಣವೇ ಸಮಾಜದ ಸಬಲೀಕರಣಕ್ಕೆ ಮೂಲಾಧಾರ ಎಂದು ಹೇಳುತ್ತಿದ್ದರು. ಉಳಿದ ಮಹಾನ್ ವ್ಯಕ್ತಿಗಳು ಕೂಡ ವಿದ್ಯಾಭ್ಯಾಸಕ್ಕೆ ಮಹತ್ತ್ವ ಕೊಟ್ಟವರೇ ಆಗಿದ್ದಾರೆ. ಯುವಜನರು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದರೆ ಮಾತ್ರ ಸದೃಢ ಮತ್ತು ಸ್ವಾವಲಂಬಿ ಭಾರತದ ಕನಸು ನನಸಾಗಲಿದೆ ಎಂದು ಅವರು ನುಡಿದರು.

ರಾಮಕೃಷ್ಣ ಪರಮಹಂಸರಿಂದ ಅಧ್ಯಾತ್ಮ ದೀಕ್ಷೆ ಪಡೆದುಕೊಂಡ ವಿವೇಕಾನಂದರು ದೇಶದಲ್ಲಿ ಸಾಮಾಜಿಕ ಸುಧಾರಣೆಯ ಜಾಗೃತಿಯನ್ನು ಹುಟ್ಟು ಹಾಕಿದರೆ, ವಿದೇಶಗಳಲ್ಲಿ ನಮ್ಮ ಸನಾತನ ಸಂಸ್ಕೃತಿ, ಧರ್ಮ, ಮೌಲ್ಯ, ಆಚಾರ ಮತ್ತು ವಿಚಾರಗಳನ್ನು ಪ್ರಚಾರ ಮಾಡಿದರು. ಈ ಮೂಲಕ ಅವರು ವೀರಸಂನ್ಯಾಸಿಗಳಾದರು ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಕಾರ್ಯಕ್ರಮಗಳಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಜಯಪಾಲ್, ಕೇಶವ, ಬಾಬು ಮುಂತಾದವರು ಉಪಸ್ಥಿತರಿದ್ದರು.

Key words: NEP -supplement -swami Vivekananda- wishes-Minister -Ashwath Narayan.