Friday, August 14, 2026

BDA Apartments

Home Front Page ನೀಟ್ ಪರೀಕ್ಷೆ ರದ್ದತಿಗೆ ವಿಶೇಷ  ಅಧಿವೇಶನಕ್ಕೆ KPCC ವಕ್ತಾರ ಎಚ್ಎ ವೆಂಕಟೇಶ್ ಒತ್ತಾಯ

ನೀಟ್ ಪರೀಕ್ಷೆ ರದ್ದತಿಗೆ ವಿಶೇಷ  ಅಧಿವೇಶನಕ್ಕೆ KPCC ವಕ್ತಾರ ಎಚ್ಎ ವೆಂಕಟೇಶ್ ಒತ್ತಾಯ

ಮೈಸೂರು,ಮೇ,16,2026 (www.justkannada.in): ವೃತ್ತಿಪರ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಾಗಿರುವ ನೀಟ್ ಈಗ ಗೊಂದಲದ ಗೂಡಾಗಿದೆ. ರಾಷ್ಟ್ರೀಯ ಮಟ್ಟದ ಪ್ರಮುಖ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಪದೇ ಪದೇ ವಿಫಲವಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ  ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ರಾಜ್ಯಗಳು ಒಟ್ಟಾಗಿ ದನಿ ಎತ್ತುವ ಅಗತ್ಯವಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಪ್ರಮುಖವಾಗಿ ಕರ್ನಾಟಕದ  ಕಾಂಗ್ರೆಸ್ ಸರ್ಕಾರ, ವಿಶೇಷ ಅಧಿವೇಶನ ಕರೆದು ಕೇಂದ್ರದ ನೀಟ್ ವೈಫಲ್ಯ ಕುರಿತು ಆಕ್ಷೇಪ ದಾಖಲಿಸಬೇಕಿದೆ. ಅಲ್ಲದೆ ಈ ಹಿಂದಿನಂತೆಯೇ ರಾಜ್ಯ ವ್ಯಾಪ್ತಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಮೂಲಕ ವೈದ್ಯಕೀಯ ಸೇರಿ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅವಕಾಶ ನೀಡುವ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಂಡು ನಿರ್ಣಯ ತೆಗೆದುಕೊಳ್ಳಬೇಕಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹಿರಿಯ ಸಚಿವರು, ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯವನ್ನು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಟ್ಟು, ನೀಟ್ ಬದಲು ಸಿಇಟಿ ಮೂಲಕ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಮರಳಿಸುವ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್ ಟಿಎ ಮೂಲಕ ದೇಶದಾದ್ಯಂತ ಏಕಸ್ವಾಮ್ಯ ಸಾಧಿಸಿ,  ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೋಷಿಸುತ್ತಿದೆ. ಅಲ್ಲದೆ ಮತ್ತೆ ಮತ್ತೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ವಿದ್ಯಾರ್ಥಿಗಳ ಮನಸ್ಥಿತಿ ಕುಂದಿಸುತ್ತಿದೆ.  ನೀಟ್ ಹಗರಣದ ಹಿಂದೆ ರಾಜಸ್ತಾನದ ಬಿಜೆಪಿಯ  ಕಾರ್ಯಕರ್ತರು ಇರುವುದು ಖಚಿತಪಟ್ಟಿದೆ. ಕೇಂದ್ರದ ಅಸಮರ್ಥ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ಒಟ್ಟು ಹಗರಣದ ಬಗ್ಗೆ ತಿಪ್ಪೇ ಸಾರಿಸುವ ಮಾತನಾಡಿದ್ದಾರೆ. ಇದು- ದೇಶದಲ್ಲಿ  ವೃತ್ತಿ ಪರ ಕೋರ್ಸ್ ಗಳ ಪರೀಕ್ಷೆಗಳು ಸಹ ಬಿಜೆಪಿಯವರಿಗೆ ಹಣ ಮಾಡುವ ದಂಧೆಯಾಗಿ ಪರಿವರ್ತನೆಯಾಗಿದೆ ಎಂಬುದಕ್ಕೆ ಸಾಕ್ಷಿ.  ಕೇಂದ್ರ ಸರ್ಕಾರ ಸದ್ಯ ನೀಟ್ ಮರು ಪರೀಕ್ಷೆ ವ್ಯವಸ್ಥೆ ಮಾಡಿದ್ದರೂ ಸಹ ಪರೀಕ್ಷೆ ಮುಂದೂಡಿಕೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ನಾಲ್ಕು ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ ಹೇಳುವವರು ಯಾರು? ಮುಗ್ಧ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದ ದಗಾಕೋರರಿಗೆ ಶಿಕ್ಷೆಯಾಗುವುದು ಯಾವಾಗ? ಎನ್ನುವ ಪ್ರಶ್ನೆಗಳು ಕಾಡುತ್ತಿವೆ ಎಂದು ಹೆಚ್ ಎ ವೆಂಕಟೇಶ್  ಕಿಡಿಕಾರಿದ್ದಾರೆ.

ಕಷ್ಟಪಟ್ಟು ಓದಿದರೂ  ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸ್ತವಾಗಿ ಇದು ಕೇವಲ ಆತ್ಮಹತ್ಯೆಯಲ್ಲ ಸರ್ಕಾರಿ ಪ್ರಾಯೋಜಿತ ಕೊಲೆ. ಹೀಗಾಗಿ ಇದರ ಹೊಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೊರಬೇಕಾಗಿದೆ. ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರಿ ನೌಕರಿ ಮತ್ತು ನಗದು ಪರಿಹಾರ ಹಣವನ್ನು ಈ ಕೂಡಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು.

ಜೊತೆಗೆ ನೀಟ್ ಪರೀಕ್ಷೆ ವಿರುದ್ಧ ಸಮರಸಾರಲು ಕರ್ನಾಟಕ ಸರ್ಕಾರವು ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಸೇರಿದಂತೆ ಇನ್ನಿತರ ರಾಜ್ಯಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಗೊಳಿಸಲು ಮತ್ತು ಹಕ್ಕು ಕಾಯ್ದುಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡುತ್ತೇನೆ ಎಂದು ಎಚ್ಎ ವೆಂಕಟೇಶ್ ತಿಳಿಸಿದ್ದಾರೆ.

Key words: KPCC spokesperson, HA Venkatesh, special session, cancel, NEET exam