ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆ ಹೃದ್ರೋಗಿಗಳಿಗೆ ವರದಾನ- ಡಾ.ಎಸ್. ಸ್ವಾಮಿನಾಥನ್

ಬೆಂಗಳೂರು,ಮಾರ್ಚ್,8,2022(www.justannada.in):  ಭಾರತದಲ್ಲಿ 45ರಿಂದ 69 ವರ್ಷದೊಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇಂಥವರಿಗೆ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುತ್ತಿರುವ ಚಿಕಿತ್ಸಾ ವಿಧಾನಗಳು ವರದಾನವಾಗಲಿವೆ ಎಂದು ತಂಜಾವೂರಿನ `ಶಾಸ್ತ್ರ ನ್ಯಾನೋ ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನಾ ಕೇಂದ್ರದ ಹಿರಿಯ ನ್ಯಾನೋ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್  ಅಭಿಪ್ರಾಯಪಟ್ಟರು.

12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶದ ಎರಡನೇ ದಿನವಾದ ಮಂಗಳವಾರ ವರ್ಚುಯಲ್ ಉಪನ್ಯಾಸ ನೀಡಿದ ಅವರು, ದೇಶದಲ್ಲಿ ಶೇಕಡ 63ರಷ್ಟು ಸಾವುಗಳಿಗೆ ಹೃದಯಾಘಾತವೇ ಕಾರಣವಾಗುತ್ತಿದೆ. 2021ರಲ್ಲಿ ಜಗತ್ತಿನಲ್ಲಿ ಹೃದಯಾಘಾತದಿಂದ 17.90 ದಶಲಕ್ಷ ಜನ ಮೃತಪಟ್ಟಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದರು.

ನ್ಯಾನೋ ತಂತ್ರಜ್ಞಾನ ಆಧಾರಿತವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿರುವ ಕಾರ್ಡಿಯಾಕ್ ಪಟ್ಟಿಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತಕ್ಕೆ ಸಮರ್ಥವಾಗಿ ಚಿಕಿತ್ಸೆ ನೀಡಬಹುದು. ಇದರ ಜತೆಗೆ, ಈ ಚಿಕಿತ್ಸೆಯಲ್ಲಿ ನ್ಯಾನೋ ಫೈಬರ್ ಗಳು ಕೂಡ ಉಪಯುಕ್ತ ಪಾತ್ರ ವಹಿಸಲಿವೆ ಎಂದು ಅವರು ವಿವರಿಸಿದರು.

ಈ ಚಿಕಿತ್ಸಾ ವಿಧಾನವನ್ನು ಪ್ರಾಣಿಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದು, ಸಕಾರಾತ್ಮಕ ಫಲಿತಾಂಶ ಬಂದಿದೆ. ಈ ಅಧ್ಯಯನವು ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ನಿಧಾನಗೊಂಡಿದೆ. ವಿಸ್ತೃತ ಅಧ್ಯಯನಕ್ಕೆ ವೈದ್ಯಕೀಯ ಸಂಸ್ಥೆಗಳು ನೆರವು ನೀಡಲು ಮುಂದೆಬಂದಿವೆ. ಇನ್ನು ಕೆಲವೇ ವರ್ಷಗಳಲ್ಲಿ ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆಗಳು ಜನಪ್ರಿಯವಾಗಲಿವೆ ಎಂದು ಸ್ವಾಮಿನಾಥನ್ ಹೇಳಿದರು.

ಅಪಘಾತ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಆಗುವ ಆಳವಾದ ಗಾಯಗಳನ್ನು ವಾಸಿ ಮಾಡಲು ಚರ್ಮ ಅಂಗಾಂಶ ಕಸಿ ವಿಧಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಚರ್ಮರಚನಾ ಶಾಸ್ತ್ರದ ವ್ಯಾಪಕ ಅಧ್ಯಯನ ನಡೆಸಲಾಗುತ್ತಿದ್ದು, ಆಂಟೋಗ್ರಾಫ್ಟ್ ಮತ್ತು ಆಲೋಗ್ರಾಫ್ಟ್ ವಿಧಾನಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಆದರೆ, ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳು ದುಬಾರಿಯಾಗಿವೆ ಎಂದು ಅವರು ನುಡಿದರು.

ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು 3ಡಿ ಪ್ರಿಂಟಿಂಗ್, 3ಡಿ ಲೇಸರ್ ಪ್ರಿಂಟಿಂಗ್ ಮುಂತಾದ ಸೌಲಭ್ಯಗಳನ್ನು ಅಂತಿಮಗೊಳಿಸಲಾಗಿದೆ. ಇವು ವ್ಯಾಪಕವಾಗಿ ಬಳಕಗೆ ಬಂದರೆ, ಆರೋಗ್ಯ ಸೇವೆಗಳೆಲ್ಲವೂ ಜನರ ಕೈಗೆಟುಕುವ ದರದಲ್ಲಿ ಸಿಕ್ಕಲಿದ್ದು, ಚಿಕಿತ್ಸೆಗಳು ಕೂಡ ನಿಖರವಾಗಲಿವೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು. ಡಾ.ಅನಿಲ್ ಕುಮಾರ್ ಅವರು ವಿಚಾರಗೋಷ್ಠಿಯನ್ನು ನಿರ್ವಹಿಸಿದರು.

Key words: Nanotechnology- treatment -boon – cardiologists.