ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ: ನಾಲ್ವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಆಗಸ್ಟ್,11,2025 (www.justkannada.in):  ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ಆಸ್ಪತ್ರೆ ಮುಂಭಾಗವೇ ರಾಡು, ಚಾಕು, ರಿಪೀಸ್ ಪಟ್ಟಿಯಿಂದ ಇಬ್ಬರ ಮೇಲೆ ಯುವಕರ ತಂಡ ಮಾರಣಾಂತಿಕ ಹಲ್ಲ ನಡೆಸಿರುವ ಘಟನೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ನಡೆದಿದೆ.

ಮೈಸೂರಿನ ಮಂಡಿಮೊಹಲ್ಲಾ ದ ನಿವಾಸಿ ಅಭಿಲಾಷ್ ಅಲಿಯಾಸ್ ಅಭಿ ಹಾಗೂ ರವಿ ಎಂಬುವರ ಮೇಲೆ ಹಲ್ಲೆಯಾಗಿದೆ.  ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು,ಆಕಾಶ್, ಸತ್ಯ, ಮಂಟಿ ಎಂಬುವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್ ಗೆ ಸುಭಾಷ್, ಆಕಾಶ್, ಸತ್ಯ ಇವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಈ ಬಗ್ಗೆ ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು.

ಈ ಮಧ್ಯೆ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ ಶಶಿಕುಮಾರ್ ಅಣ್ಣ ಅನಾರೋಗ್ಯದ ಹಿನ್ನಲೆ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಮಂಟಿಯ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್ ಗಳನ್ನ ಹಿಡಿದು ಭೀತಿ ಸೃಷ್ಟಿಸಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅಣ್ಣ ರವಿ ಮೇಲೂ ದಾಳಿ ನಡೆಸಿದ್ದಾರೆ.  ಈ ವೇಳೆ ಅಭಿಷೇಕ್ ತಪ್ಪಿಸಿಕೊಂಡು ಓಡಿದರೂ ಚೇಸ್ ಮಾಡಿದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ರವರನ್ನ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

Key words: Nanjanagudu,  Two people, Assault, Case, registered