ಮೈಸೂರು, ಜೂನ್,29,2026 (www.justkannada.in): ಮೈಸೂರು ಸಮೀಪದ ಕಳಲವಾಡಿ ಗ್ರಾಮದ ರೈತ ರವೀಂದ್ರರೆಡ್ಡಿ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಕಳ್ಳರು ಸರಣಿ ಕೃತ್ಯ ಎಸಗಿದ್ದು, ಮೂರು ದಿನಗಳ ಅವಧಿಯಲ್ಲಿ ಸುಮಾರು 390ಕ್ಕೂ ಹೆಚ್ಚು ಅಡಿಕೆ ಮರಗಳ ಹೋಂಬಾಳೆ ಕತ್ತರಿಸಿ ಕೊಂಡೊಯ್ದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಶುಕ್ರವಾರ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 200 ಅಡಿಕೆ ಮರಗಳ ಹೋಂಬಾಳೆಯನ್ನು ಕತ್ತರಿಸಿ ಪರಾರಿಯಾಗಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು (ಎಸ್ ಐ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಆದರೆ ಪೊಲೀಸ್ ಅಧಿಕಾರಿಗಳ ಭೇಟಿ ಬಳಿಕವೂ ಕಳ್ಳರ ಕೃತ್ಯ ನಿಲ್ಲದೆ, ಶನಿವಾರ ರಾತ್ರಿ ಮತ್ತೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 100 ಮರಗಳ ಹೋಂಬಾಳೆಯನ್ನು ಕತ್ತರಿಸಿದ್ದಾರೆ. ಇದಾದ ಬಳಿಕ ಭಾನುವಾರ ರಾತ್ರಿ ಮತ್ತೊಮ್ಮೆ ದಾಳಿ ನಡೆಸಿ ಸುಮಾರು 90 ಮರಗಳ ಹೋಂಬಾಳೆಯನ್ನು ಕತ್ತರಿಸಿ ಪರಾರಿಯಾಗಿದ್ದಾರೆ.
ಹೀಗೆ ಮೂರು ದಿನಗಳಲ್ಲೇ ಒಟ್ಟು ಸುಮಾರು 390 ಅಡಿಕೆ ಮರಗಳ ಹೋಂಬಾಳೆ ನಾಶವಾಗಿರುವುದರಿಂದ ತೋಟದ ಮಾಲೀಕ ರವೀಂದ್ರರೆಡ್ಡಿ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಅಡಿಕೆ ಮರಗಳ ಬೆಳವಣಿಗೆ ಹಾಗೂ ಮುಂದಿನ ಇಳುವರಿಗೆ ಹೋಂಬಾಳೆ ಅತ್ಯಂತ ಪ್ರಮುಖವಾಗಿದ್ದು, ಇದನ್ನು ಕತ್ತರಿಸುವುದರಿಂದ ಮರಗಳ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕಳ್ಳತನವಾಗಿರುವ ಹೋಂಬಾಳೆಗಳನ್ನು ಮದುವೆ, ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಹೂವಿನ ಅಲಂಕಾರಗಾರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಇಂತಹ ಕೃತ್ಯಗಳಿಗೆ ಉತ್ತೇಜನ ಸಿಗುತ್ತಿದ್ದು, ಕಳ್ಳತನದ ವಸ್ತುಗಳನ್ನು ಖರೀದಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪೊಲೀಸರ ಭೇಟಿ ಬಳಿಕವೂ ಸತತವಾಗಿ ಎರಡು ರಾತ್ರಿ ಕಳ್ಳತನ ನಡೆದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಕಳಲವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಿ, ಕಳ್ಳರ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ENGLISH SUMMARY…
Mysuru: Serial Theft Targets Areca Plantation, Hundreds of Trees Damaged
Mysuru, June 29: Thieves have repeatedly targeted an areca plantation owned by Ravindra Reddy at Kalalavadi village near Mysuru, cutting the tender crowns (hombale) of more than 390 areca trees over three consecutive nights.
Around 200 trees were damaged on Friday night, followed by about 100 trees on Saturday and another 90 on Sunday. Despite a visit by the Mysuru South Police Station SI after the first incident, the thefts continued.
The repeated attacks have caused significant financial loss to the farmer, as the removal of the crown can affect the growth and productivity of areca trees.
Locals suspect the stolen crowns are being sold cheaply to flower decorators for use in weddings and other functions. Farmers have urged police to identify the culprits and take action against those purchasing stolen materials.
Key words: Mysuru, Serial Theft, Areca, Plantation, Hundreds, Trees, Damaged






