ಮೈಸೂರಿನ ಸಿಎಫ್’ಟಿಆರ್’ಐ ತಂತ್ರಜ್ಞಾನ: ವಿಮಾನದಲ್ಲಿ ಫಟಾಫಟ್ ಇಡ್ಲಿ-ಸಾಂಬರ್ !

– ಇಂಡಿಗೊ ಏರ್‌ಲೈನ್ಸ್  ಸಂಸ್ಥೆ ಸಿದ್ಧತೆ

– ವಿಮಾನದಲ್ಲಿ  ಸಿಗಲಿದೆ ಬಿಸಿ ಇಡ್ಲಿ -ಸಾಂಬಾರ್

ಮೈಸೂರು, ಮೇ 22, 2022 (www.justkannada.in): ವಿಮಾನಯಾನದ ನಡುವೆ ದಕ್ಷಿಣ ಭಾರತದ ವಿಶಿಷ್ಟ  ಖಾದ್ಯವಾದ ಇಡ್ಲಿ -ಸಾಂಬಾರ್ ಸವಿಯಬೇಕೆ? ಬಿಸಿ ನೀರೊಂದಿದ್ದರೆ ನಾಲ್ಕು ನಿಮಿಷದಲ್ಲಿ  ಈ ಆಹಾರವನ್ನು ನೀವೇ ಸಿದ್ಧಪಡಿಸಿಕೊಳ್ಳಬಹುದು. ಇಂತದ್ದೊಂದು ತಂತ್ರಜ್ಞಾನವನ್ನು ದೇಶದ ಹೆಮ್ಮೆಯ ಮೈಸೂರಿನ ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ) ಹೊರತಂದಿದೆ. ಇಂಡಿಗೊ ಏರ್‌ಲೈನ್ಸ್  ಸಂಸ್ಥೆ ತನ್ನ ಪ್ರಯಾಣಿಕರಿಗೆ ಈ ಸೇವೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಯಾವುದೇ ವಿಮಾನಯಾನ ಸೇವೆಯಲ್ಲಿ  ಬೆಂಕಿ ಅವಘಡ ಸಂಭವಿಸಬಹುದಾದ ಕಾರಣಕ್ಕೆ ಅಡುಗೆ ಮಾಡುವ ವ್ಯವಸ್ಥೆ ಇರುವುದಿಲ್ಲ. ಹೀಗಿದ್ದರೂ ಬಿಸಿಯಾದ ಆಹಾರ ಸವಿಯಬಹುದಾದ ತಾಂತ್ರಿಕತೆಯನ್ನು ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿದೆ. ಸಂಸ್ಕರಿಸಿದ ಆಹಾರದ ಪುಡಿಯನ್ನು ಕೇವಲ ಬಿಸಿ ನೀರು ಹಾಕಿದರೆ ಅದು ಕರಗಿ ಬಿಸಿ ಉಪ್ಮಘಿ, ಅವಲಕ್ಕಿ ಉಪ್ಪಿಟ್ಟು  ಸಿದ್ಧವಾಗುವ ವಿಧಾನವನ್ನು ಸಿಎಫ್‌ಟಿಆರ್‌ಐ ಕಂಡುಹಿಡಿದಿದೆ. ಇದೇ ರೀತಿಯಲ್ಲಿಯೇ ಇದೀಗ ಸಂಸ್ಕರಿಸಿದ ಬಟ್ಲು ಇಡ್ಲಿ ಹಾಗೂ ಸಾಂಬಾರ್ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ರುಚಿಕಟ್ಟಾದ ಇಡ್ಲಿ -ಸಾಂಬಾರ್ ಮಾಡಿಕೊಳ್ಳುವ ತಂತ್ರಜ್ಞಾನ ಆವಿಷ್ಕರಿಸಿದೆ. ಸದ್ಯ ಕರ್ನಾಟಕ ಹಾಗೂ ತಮಿಳುನಾಡು ಮಾದರಿ ರುಚಿಯ ಸಾಂಬಾರ್ ಪುಡಿ ಸಿದ್ಧಪಡಿಸಲಾಗಿದೆ.

ಇಡ್ಲಿ ಮಾಡುವುದು ಒಂದು ದಿನದ ಪ್ರಕ್ರಿಯೆಯಾಗಿದೆ. ಮೊದಲಿಗೆ ಅರ್ಧ ದಿನ ಅಕ್ಕಿ, ಉದ್ದನ್ನು ನೆನೆಸಿಟ್ಟು ನಂತರ ಅದನ್ನು ಗ್ರೈಂಡ್ ಮಾಡಲಾಗುತ್ತದೆ. ಬಳಿಕ ಅದಕ್ಕೆ ಉಪ್ಪು ಹಾಕಿ ರಾತ್ರಿಯಿಡಿ ನೆನೆಸಿಡಲಾಗುತ್ತದೆ. ಮುಂಜಾನೆ ವೇಳೆಗೆ ಇದು ಸ್ವಲ್ಪ ಹುಳಿ ಬಂದು ಇಡ್ಲಿ ಮಾಡಲು ಸಿದ್ಧವಾಗುತ್ತದೆ. ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿದಾಗ ಇಡ್ಲಿ ದೊರೆಯುತ್ತದೆ. ಹೊಸದಾಗಿ ಸಿದ್ಧಪಡಿಸಿರುವ ರೆಡಿ ಟು ಈಟ್ ಇಡ್ಲಿ -ಸಾಂಬಾರ್ ಕೇವಲ ನಾಲ್ಕು ನಿಮಿಷದಲ್ಲಿ  ತಿನ್ನಲು ಸಿದ್ಧವಾಗುತ್ತದೆ.

ಬಳಕೆ ಹೇಗೆ ?

ಸಾಂಬಾರ್ ಪುಡಿಗೆ ಬಿಸಿನೀರು ಬೆರೆಸಿದರೆ ಸಾಂಬಾರ್ ಸಿದ್ಧವಾಗುತ್ತದೆ. ನಂತರ ಸಂಸ್ಕರಿಸಿದ ಇಡ್ಲಿಯನ್ನು ಸಾಂಬಾರ್‌ನಲ್ಲಿ  ಹಾಕಿದರೆ ಅದು ಕೇವಲ ನಾಲ್ಕು ನಿಮಿಷದಲ್ಲಿ ಸುರಕ್ಷಿತ, ಆರೋಗ್ಯಕರವಾದ ಇಡ್ಲಿ -ಸಾಂಬಾರ ರೆಡಿಯಾಗುತ್ತದೆ. ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿರುವ ಈ ಆಹಾರದ ರುಚಿಯನ್ನು ಇಂಡಿಗೊ ಏರ್‌ಲೈನ್ಸ್ ಸಂಸ್ಥೆ  ಪ್ರಯಾಣಿಕರಿಗೆ ಪರಿಚಯಿಸುತ್ತಿದೆ. ಇದರಿಂದಾಗಿ ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದ ಇಡ್ಲಿ  ಇನ್ನು ಮುಂದೆ ದೇಶದಾದ್ಯಂತ ಆಹಾರ ಪ್ರಿಯರ ಮನ ತಣಿಸಲಿದೆ.

ಆ್ಯಂಟಿ ಆಕ್ಸಿಡೆಂಟ್ ಕೋಲ್ಡ್ ಕಾಫಿ

ಈವರೆಗೆ ಕೋಲ್ಡ್ ಕಾಫಿ ನಿಗದಿತ ಸ್ಥಳದಲ್ಲಿ  ದೊರೆಯುತ್ತಿತ್ತು. ಇದೀಗ ಕೋಲ್ಡ್ ಡ್ರಿಂಕ್ಸ್  ಮಾದರಿಯಲ್ಲಿ  ಮನೆಯಲ್ಲಿಟ್ಟುಕೊಂಡು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದಾದ ಆ್ಯಂಟಿ ಆಕ್ಸಿಡೆಂಟ್ ಕೋಲ್ಡ್ ಕಾಫಿಯನ್ನು ಸಿಎಫ್‌ಟಿಆರ್‌ಐ ಹೊರತಂದಿದೆ. ಚಾಕೊಲೆಟ್, ವೆನಿಲ್ಲಾ  ಫ್ಲೇವರ್‌ನಲ್ಲಿ  ಹಾಗೂ ಗ್ರೀನ್ ಕಾಫಿ ಮಾದರಿಯಲ್ಲಿಯೂ ಈ ಉತ್ಪನ್ನ ದೊರೆಯುತ್ತದೆ. ಜೀರ್ಣಕ್ರಿಯೆ ಸಂದರ್ಭದಲ್ಲಿ  ಉತ್ಪತ್ತಿಯಾಗುವ ಕೆಟ್ಟ  ಆಮ್ಲಜನಕದ ಸಮಸ್ಯೆಯಿಂದ ಮುಕ್ತವಾದ ಹಾಗೂ ಕಡಿಮೆ ಪ್ರಮಾಣದ ಕೆಫಿನ್ ಇರುವ ಉತ್ಪನ್ನ ಇದಾಗಿದೆ.

ಸಂಸ್ಕರಿಸಿದ ಕಟ್ ಫ್ರೂಟ್

ನಾವು ಮಾರುಕಟ್ಟೆಯಿಂದ ತಂದು ಸೇವಿಸುವ ಕೆಲವು ಹಣ್ಣುಗಳನ್ನು ಕತ್ತರಿಸಿ ನೋಡಿದಾಗ ಕೊಳೆತು ಹೋಗಿರಬಹುದು. ಮಾತ್ರವಲ್ಲದೇ ಇದು ಮೂರರಿಂದ ನಾಲ್ಕು ದಿನಗಳ ನಂತರ ಕೆಟ್ಟು ಹೋಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಸಿಎಫ್‌ಟಿಆರ್‌ಐ ಮಿತವಾಗಿ ಸಂಸ್ಕರಿಸಿದ ಹಾಗೂ ಸಾಮಾನ್ಯವಾಗಿ ಸಂಗ್ರಹಿಡುವ ಹಣ್ಣಿಗಿಂತ ಐದು ಪಟ್ಟು ಹೆಚ್ಚು ಕಾಲವಿಟ್ಟುಕೊಂಡು ತಿನ್ನಬಹುದಾದ ಅದೇ ತಾಜಾತನವಿರುವ ರೆಡಿ ಟು ಈಟ್ ಮಾದರಿಯ ಕಟ್‌ಫ್ರೂಟ್ ಸಿದ್ಧಗೊಳಿಸುವ ವಿಧಾನವನ್ನು ಪರಿಚಯಿಸಿದೆ.

 

ಒತ್ತಡದ ಜೀವನದಿಂದಾಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದೇ ಸಿದ್ಧ ಮಾದರಿಯ ಆಹಾರ ಸೇವನೆ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಹೀಗೆ ಬದಲಾದ ಜೀವನಶೈಲಿಗೆ ತಕ್ಕಂತೆ ಹಾಗೂ ಗ್ರಾಹಕ ಸ್ನೇಹಿ ಆಹಾರ ಒದಗಿಸುವ ನಿಟ್ಟಿನಲ್ಲಿ  ಈ ಉತ್ಪನ್ನಗಳನ್ನು ಆವಿಷ್ಕಾರ ಮಾಡಲಾಗಿದೆ.

-ಬಿ.ವಿ.ಸತ್ಯೇಂದ್ರರಾವ್, ತಂತ್ರಜ್ಞಾನ ವರ್ಗಾವಣೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ, ಸಿಎಫ್‌ಟಿಆರ್‌ಐ.

ಕೃಪೆ: ಬೀರೇಶ್ ಕಬಿನಿ ಮೈಸೂರು, ವಿಜಯ ಕರ್ನಾಟಕ