ಮೈಸೂರು ವಿವಿ ‘ ಫ್ರೀ ಕಾಶ್ಮೀರ ‘ ಪ್ಲೆ ಕಾರ್ಡ್ ವಿವಾದ : ಪ್ರತಿಭಟನೆಯಲ್ಲಿದ್ದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಅಮಾನತ್ತಿಗೆ ಸಿಂಡಿಕೇಟ್ ನಿರ್ಣಯ

 

ಮೈಸೂರು, ಜ.17, 2020 : (www.justkannada.in news) : ಪೌರತ್ವಕಾಯ್ಡೆ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೈಸೂರು ವಿವಿ ವಿದ್ಯಾರ್ಥಿಗಳನ್ನು ಈ ಕೂಡಲೇ ಹಾಸ್ಟೆಲ್ ನಿಂದ ಅಮಾನತುಗೊಳಿಸಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ಮೈಸೂರು ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳ ವಸತಿ ಗೃಹಗಳಲ್ಲಿ ಅನಧಿಕೃತವಾಗಿ ನೆಲೆಸಿರುವವನ್ನು ಅಲ್ಲಿಂದ ತೆರವುಗೊಳಿಸವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲು ಸಿಂಡಿಕೇಟ್ ಸಭೆ ನಿರ್ಧರಿಸಿದೆ ಎಂದು ವಿವಿ ಮೂಲಗಳು ‘ಜಸ್ಟ್ ಕನ್ನಡ’ ಗೆ ಮಾಹಿತಿ ನೀಡಿವೆ.

ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ‘ಫ್ರೀ ಕಾಶ್ಮೀರ ‘ ಪ್ಲೆ ಕಾರ್ಡ್ ವಿವಾದಕ್ಕೆ ಎಡೆಮಾಡಿತ್ತು. ಈ ಕಾರಣಕ್ಕೆ ಪ್ಲೆ ಕಾರ್ಡ್ ಪ್ರದರ್ಶಿಸಿದ ಯುವತಿ ಹಾಗೂ ಪ್ರತಿಭಟನೆ ಆಯೋಜಿಸಿದ್ದ ಸಂಘಟಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ಘಟನೆ ಬಳಿಕ ಇಂದು ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಹಾಗೂ ಆನಂತರದ ಘಟನೆಗಳ ಬಗೆಗೆ ಹೆಚ್ಚು ಚರ್ಚಿಸಲಾಯಿತು ಎನ್ನಲಾಗಿದೆ.

ಮೊದಲಿಗೆ ವಿಷಯ ಪ್ರಸ್ತಾಪಿಸಿದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಈ ಕೂಡಲೇ ಹಾಸ್ಟೆಲ್ ನಿಂದ ಅಮಾನತುಗೊಳಿಸಿ ಎಂದು ಒತ್ತಾಯಿಸಿದರು. ಫ್ರೀ ಕಾಶ್ಮೀರ್ ಪ್ಲೇಕಾರ್ಡ್ ಪ್ರದರ್ಶನದ ಘಟನೆಯಿಂದ ಮೈಸೂರು ವಿವಿ ರಾಷ್ಟ್ರೀಯಮಟ್ಟದಲ್ಲಿ ಸುದ್ಧಿಯಾಯಿತು. ಆ ಮೂಲಕ ವಿವಿಗೆ ಕಳಂಕ ತಟ್ಟಿದೆ. ಈ ಕೂಡಲೇ ಹಾಸ್ಟೆಲ್ ಗಳಲ್ಲಿ ಅನಧಿಕೃತವಾಗಿ ವಿದ್ಯಾರ್ಥಿಗಳ ಸೋಗಿನಲ್ಲಿ ನೆಲೆಸಿರುವವರನ್ನು ಅಲ್ಲಿಂದ ತೆರವುಗೊಳಿಸಬೇಕು. ಇಂಥ ವ್ಯಕ್ತಿಗಳಿಂದ ಮೈಸೂರು ವಿವಿ ಹಾಸ್ಟೆಲ್ ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಮುಂದೊಂದು ದಿನ ಪೊಲೀಸ್ ದಾಳಿ ಮೂಲಕ ಇವು ಬೆಳಕಿಗೆ ಬಂದಲ್ಲಿ ಪ್ರತಿಷ್ಠಿತ ಮೈಸೂರು ವಿವಿಗೆ ಮತ್ತಷ್ಟು ಕಳಂಕ ಬರುತ್ತದೆ. ಆದ್ದರಿಂದ ಈ ಕೂಡಲೇ ಅನಧಿಕೃತವಾಗಿ ವಾಸವಿರುವವರನ್ನು ಪತ್ತೆ ಹಚ್ಚಿ ಅವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು ಎನ್ನಲಾಗಿದೆ. ಇದಕ್ಕೆ ಒತರೆ ಸದಸ್ಯರು ಸಹ ದನಿಗೂಡಿಸಿ ಮೈಸೂರು ವಿವಿ ಪ್ರತಿಷ್ಠೆ ಮಣ್ಣಾಗಾದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

ಸಿಂಡಿಕೇಟ್ ಸದಸ್ಯರ ಈ ಆಗ್ರಹದ ಸಲುವಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಅಮಾನತು ಮಾಡಲು ಸಭೆ ಸಮ್ಮತಿಸಿತು. ಜತೆಗೆ ಸದ್ಯದಲ್ಲೇ ಸಮಿತಿಯೊಂದನ್ನು ರಚಿಸಿ ಮೈಸೂರು ವಿವಿ ಹಾಸ್ಟೆಲ್ ಗಳಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ಅಲ್ಲಿಂದ ತೆರವುಗೊಳಿಸಲು ನಿರ್ಧರಿಸಲಾಯಿತು ಎಂದು ಸಿಂಡಿಕೇಟ್ ಮೂಲಗಳು ತಿಳಿಸಿವೆ.

key words : mysore-university-syndicate-meeting-free-kashmir-controversy-students-suspended-from-hostel