ಮೈಸೂರು ವಿವಿ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆ ಪರಿಶೀಲಿಸಿದ ಎಂ.ಶಿವಣ್ಣ.

ಮೈಸೂರು,ಜನವರಿ,18,2022(www.justkannada.in):  ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಮಂಗಳವಾರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವಲದಲ್ಲಿ ಸಭೆ ನಡೆಸಿದರು.

ಈ ವೇಳೆ ಪೌರ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯ ಹಾಗೂ ದೊರೆಯಬೇಕಿರುವ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿವಿ ವ್ಯಾಪ್ತಿಯಲ್ಲಿ 234 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕನಿಷ್ಠ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ಸಮಯದಲ್ಲಿ ಫುಡ್ ಕಿಟ್ ವಿತರಣೆ ಮಾಡಲಾಗಿದೆ. ಡಿಎ ಬದಲಾವಣೆ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿಟ್ಟು ಕ್ರಮ ಕೈಗೊಳ್ಳಲಾಗುವುದು. ಸರಕಾರ ಸಹಕಾರ ಕೊಟ್ಟರೆ ವಸತಿ ಸೌಲಭ್ಯವನ್ನೂ ಪೌರ ಕಾರ್ಮಿಕರಿಗೆ ಕಲ್ಪಿಸಲಾಗುವುದು ಎಂದರು.

ನಿಯಮಿತವಾಗಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 197 ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಫೆಲೋಶಿಪ್ ನೀಡಲಾಗಿದೆ. ನೂತನ ಹಾಸ್ಟೆಲ್ ಕೂಡ ಕಟ್ಟಲಾಗಿದೆ. ಶೌಚಾಲಯ, ನೀರಿನ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಮೈಸೂರು ವಿವಿ ಪೌರ ಕಾರ್ಮಿಕ ಪಿಎಫ್ ಹಣವನ್ನು ಸಂದಾಯ ಮಾಡಿದೆ. ಆದರೆ, ಕೆಲವೊಂದು ದಾಖಲೆ ದೊರೆಯದ ಪರಿಣಾಮ ಪಿಎಫ್ ಹಣ ಮುಟ್ಟುಗೋಲು ಆಗಿದೆ.  15 ದಿನದಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಸಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಸರಕಾರಕ್ಕೆ ವಿವಿ ಪ್ರಸ್ತಾವನೆ ಸಲ್ಲಿಸಿದರೆ ಸಿಎಂ ಜೊತೆ ಚರ್ಚಿಸಲಾಗುವುದು. ಅಲ್ಲದೆ, ಸ್ವಚ್ಛತಾ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಐಡಿ ಕಾರ್ಡ್ ನೀಡಬೇಕು. ಪೌರ ಕಾರ್ಮಿಕರಿಗೆ ಬರಬೇಕಾದ ಹಳೆ ಬಾಕಿ ಹಣವನ್ನು ಎರಡು ಕಂತಿನಲ್ಲಿ ನೀಡುವಂತೆ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಭಾ ಅರಸ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂಡಿ ಮುನಿರಾಜು, ಮೈವಿವಿ ಕುಲಸಚಿವ (ಆಡಳಿತ) ಪ್ರೊ.ಆರ್.ಶಿವಪ್ಪ, ಡೆಪ್ಯೂಟಿ ರಿಜಿಸ್ಟ್ರಾರ್ ಡಾ.ಬಸಪ್ಪ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಎಸ್.ಟಿ.ರಾಮಚಂದ್ರ, ಗಿರೀಶ್ ಸೇರಿದಂತೆ ಇತರರು ಇದ್ದರು.

Key words: Mysore university- M Shivanna- reviewing –VC-Hemanth kumar