ಕ್ಷಮಿಸಿ, ತಪ್ಪಾಗಿದೆ : ಜಸ್ಟ್ ಕನ್ನಡದಲ್ಲಿ ಪ್ರಕಟವಾಗಿದ್ದ ಅಣ್ಣಾವ್ರ ಫ್ಯಾಮಿಲಿ ಗ್ರೂಪ್ ಫೋಟೋಗೆ ಸ್ಪಷ್ಟನೆ.

ಮೈಸೂರು, ಮಾ.25, 2022 : ವರನಟ ಡಾ.ರಾಜ್ ಕುಮಾರ್ ಅವರಿಗೆ ಮೈವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಸಂದರ್ಭದಲ್ಲಿ ತೆಗೆದದ್ದು ಎನ್ನಲಾದ ಭಾವಚಿತ್ರವೊಂದಕ್ಕೆ ಇದೀಗ ಖುದ್ದು ರಾಜ್ ಕುಟುಂಬದ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ.
ಜಸ್ಟ್ ಕನ್ನಡದಲ್ಲಿ ಪ್ರಕಟವಾಗಿದ್ದ ಈ ಫೋಟೋಗೆ ಸಂಬಂಧಿಸಿದಂತೆ ಡಾ.ರಾಜ್ ಕುಟುಂಬ ಈ ಸ್ಪಷ್ಟನೆ ನೀಡಿದೆ.
ಮೈಸೂರು ವಿವಿ ಮಾ. 22 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ಈ ದಿನ ‘ ಜಸ್ಟ್ ಕನ್ನಡ’ ದಲ್ಲಿ ಅಣ್ಣವ್ರ ಕುಟುಂಬದ ಬ್ಲಾಕ್ ಅಂಡ್ ವೈಟ್ ಗ್ರೂಪ್ ಫೋಟೋ ಒಂದನ್ನು ಪೋಸ್ಟ್ ಮಾಡಿ, “ರಾಜಕುಮಾರ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಸಂದರ್ಭದಲ್ಲಿ ಲಲಿತ ಕಲೆಗಳ ಕಾಲೇಜಿಗೆ ಅಣ್ಣಾವ್ರ ಸಂಸಾರವೇ ಆಗಮಿಸಿತ್ತು. ಅಂದು ಪಾರ್ವತಮ್ಮ ಅವರ ತೊಡೆ ಮೇಲೆ ಪುನೀತ್, ನೆಲದಲ್ಲಿ ಶಿವಣ್ಣ , ರಾಘು . ಸುತ್ತಲು ಕಾಲೇಜು ಸಿಬ್ಬಂದಿ” ಎಂಬ ಶೀರ್ಷಿಕೆ ನೀಡಲಾಗಿತ್ತು.
ಈ ಪೋಸ್ಟ್ ಅನ್ನು ರಾಜ್ ಕುಟುಂಬಕ್ಕೆ ಆಪ್ತರಾದ ‘ ಜಸ್ಟ್ ಕನ್ನಡ’ ದ ಓದುಗರೊಬ್ಬರು ರಾಜ್ ಪುತ್ರಿ, ಪೂರ್ಣಿಮ ರಾಜ್ ಕುಮಾರ್ ಅವರಿಗೆ ಕಳುಹಿಸಿದ್ದರು. ಆಗ ಅವರು, ಇದು ಗೌರವ ಡಾಕ್ಟರೇಟ್ ಪ್ರದಾನ ಸಂದರ್ಭದಲ್ಲಿ ತೆಗೆದ ಚಿತ್ರವಲ್ಲ. ಜತೆಗೆ ಚಿತ್ರದಲ್ಲಿ ಪಾರ್ವತಮ್ಮ ಅವರ ತೊಡೆ ಮೇಲೆ ಕುಳಿತುರುವುದು ಅಪ್ಪು ಅಲ್ಲ, ಬದಲಿಗೆ ಅದು ನಾನು. ಅದೇ ರೀತಿ ನೆಲದ ಮೇಲೆ ಕುಳಿತವರು ಶಿವಣ್ಣ- ರಾಘಣ್ಣ ಅಲ್ಲ, ಬೇರೆ ಯಾರೋ ಮಕ್ಕಳು ಎಂದು ಪೂರ್ಣಿಮ ರಾಜ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಪಷ್ಟನೆ :
ಕಪ್ಪು-ಬಿಳುಪಿನ ಈ ಚಿತ್ರ ಹಾಗೂ ಶಿರ್ಷಿಕೆ ಸಂದರ್ಭೋಚಿತವಾಗಿದ್ದ ಕಾರಣ ಜಸ್ಟ್ ಕನ್ನಡದಲ್ಲಿನ ಈ ಫೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ರಾಜ್ ಹಾಗೂ ಅಪ್ಪು ಅಭಿಮಾನಿಗಳಲ್ಲಿ ಪುಳಕ ಮೂಡಿಸಿತ್ತು. ಆದರೆ ತಪ್ಪು ಗ್ರಹಿಕೆಯಿಂದ ಶಿರ್ಷಿಕೆಯಲ್ಲಿ ಲೋಪವಾಗಿರುವುದು ತಿಳಿದು, ಇದೀಗ ಓದುಗರಿಗೆ ತಪ್ಪು ಮಾಹಿತಿ ನೀಡಬಾರದು ಎಂಬ ಸಲುವಾಗಿ ಈ ಸ್ಪಷ್ಟನೆ ನೀಡಲಾಗಿದೆ.

key words : mysore-university-dr.rajkumar-famly-photo-clarification