ಮೈಸೂರು,ಅಕ್ಟೋಬರ್,27,2025 (www.justkannada.in): ದಯವಿಟ್ಟು ನನಗೆ ನಮ್ಮ ಅಪ್ಪನ ಶವ ಕೊಟ್ಟು ಬಿಡಿ ಸಾಕು ಯಾವ ಮಿನಿಸ್ಟರ್ ಬರೋದು ಬೇಡ, ನಮಗ್ಯಾವ ಪರಿಹಾರವೂ ಬೇಡ ಹೀಗೆ ಅಕ್ರೋಶ ವ್ಯಕ್ತಪಡಿಸಿದ್ದು ನಿನ್ನೆ ಹುಲಿ ದಾಳಿಗೆ ಬಲಿಯಾದ ರೈತ ರಾಜಶೇಖರ್ ಅವರ ಪುತ್ರ ಶಿವಾನಂದ.
ನಿನ್ನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ರೈತ ರಾಜಶೇಖರ್(58) ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು. ಈ ವೇಳೆ ರಾಜಶೇಖರ್ ಸಾವನ್ನಪ್ಪಿದ್ದರು.
ಪದೇ ಪದೇ ಹುಲಿ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ತಡರಾತ್ರಿವರೆಗೂ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ನಂತರ ಶವವನ್ನ ಪೋಸ್ಟ್ ಮಾರ್ಟಮ್ ಮಾಡಲು ಮೈಸೂರಿಗೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ರಾಜಶೇಖರ್ ಅವರ ಪುತ್ರ ಶಿವಾನಂದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪುತ್ರ ಶಿವಾನಂದ, ನಿನ್ನೆ ತಡರಾತ್ರಿವರೆಗೂ ಸ್ಥಳದಲ್ಲೇ ಶವವಿಟ್ಟು ಪ್ರತಿಭಟನೆ ಮಾಡಿದ್ದವು. ಸರಗೂರಿನಲ್ಲಿ ಪೋಸ್ಟ್ ಮಾರ್ಟಂ ಮಾಡುತ್ತೇವೆ ಅಂತ ಮೈಸೂರಿಗೆ ತಂದಿದ್ದಾರೆ. ಯಾವ ಕಾರಣಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಗೂರು, ಹೆಚ್.ಡಿ ಕೋಟೆ ಬಿಟ್ಟು ಮೈಸೂರಿಗೆ ಶವ ಯಾಕೆ ತಂದಿರಿ? ದಯಮಾಡಿ ನನಗೆ ನಮ್ಮ ತಂದೆಯ ಶವ ಕೊಡಿ. ನಿಮ್ಮ ಮಿನಿಸ್ಟರ್ ಬರ್ತಾರೆ ಅಂತ ಶವ ಅಲ್ಲಿಂದ ಮೈಸೂರಿಗೆ ತಂದರಾ? ನಿನ್ನೆ 10 ಕಿಲೋ ಮೀಟರ್ ದೂರದಿಂದ ಮಿನಿಸ್ಟರ್ ಈಶ್ವರ ಖಂಡ್ರೆ ಬರಲಿಲ್ಲ. ನಮ್ಮ ತಂದೆ ಸಾವಿಗೆ ಅಲ್ಲಿನ ಅರಣ್ಯ ಅಧಿಕಾರಿಗಳೇ ಕಾರಣ. ಅವರು ಅಮಾನತ್ತು ಆಗಬೇಕು. ನಾವು ಕಾಡಿಗೆ ಹೋಗಿಲ್ಲ. ಕಾಡಿನಿಂದ 30 ಕಿಲೋ ಮೀಟರ್ ದೂರ ಬಂದು ಹುಲಿ ದಾಳಿ ಮಾಡಿದೆ ಎಂದು ಕಿಡಿಕಾರಿದರು.
ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಹಿನ್ನಲೆಯಲ್ಲಿ ಹುಲಿಗಳು ಕಾಡಿನಿಂದ ನಾಡಿಗೆ ಬಂದಿದೆ. ಇದನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳ ಹಿತಕ್ಕಾಗಿ ರೈತರ ಸಾವಿಗೆ ಬೆಲೆ ಯಾಕೆ ಕಟ್ಟುತ್ತೀರಿ? ಥೂ, ನಿಮ್ಮ ಜನ್ಮಕ್ಕೆ ನಾಚಿಕೆ ಆಗಲ್ವಾ? ಅಧಿಕಾರಿಗಳು, ರಾಜಕಾರಣಿಗಳ ದಾಹಕ್ಕೆ ರೈತರ ಸಾವಾಗಿದೆ ಎಂದು ಶಿವಾನಂದ್ ಹರಿಹಾಯ್ದರು.
Key words: Mysore, tiger, attack farmer, Hospital, body







