ಮೈಸೂರು,ಅಕ್ಟೋಬರ್,27,2025 (www.justkannada.in): ನಿನ್ನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ರಾಜಶೇಖರ್ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಶವಾಗಾರಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ರೈತ ಮುಖಂಡರು, ಕುಟುಂಬಸ್ಥರು ಘೇರಾವ್ ಹಾಕಿದ ಘಟನೆ ನಡೆಯಿತು.
ಮೈಸೂರಿನಲ್ಲಿ ಶವಗಾರಕ್ಕೆ ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತಮುಖಂಡರು, ಕುಟುಂಬಸ್ಥರು, ಶವವನ್ನ ಇಲ್ಲಿಗೆ ಏಕೆ ತಂದಿರಿ? ಸತ್ತ ಹೆಣದ ಮುಂದೆ ರಾಜಕಾರಣ ಮಾಡಲು ಮುಂದಾದ್ರಾ? ಇಲ್ಲಿಗೆ ಬಂದು ನೋಡುವುದು ಏನಿದೆ ಹೇಳಿರಿ? ಮಾನ, ಮರ್ಯಾದೆ ಇದೆಯಾ ನಿಮಗೆ ? ವಿಧಾನಸೌಧಕ್ಕೆ ಶವ ತೆಗೆದುಕೊಂಡು ಹೋಗ್ರಿ? ಎಂದು ಫುಲ್ ಕ್ಲಾಸ್ ತೆಗದುಕೊಂಡರು.
ಇದೇ ವೇಳೆ ರೈತ ಮುಖಂಡರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆಯಿತು. ನೀವೇನು ಮನುಷ್ಯರಾ? ಮೃಗಗಳಾ? ಅಕ್ರಮ ರೆಸಾರ್ಟ್ ಗಳೇ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರಿಗೆ ಉತ್ತರಿಸಲಾಗದೆ ಸಚಿವ ಈಶ್ವರ್ ಖಂಡ್ರೆ ಅಲ್ಲಿಂದ ಕಾಲ್ಕಿತ್ತರು.
ನನಗಾಗಿ ಶವ ಇಲ್ಲಿಗೆ ತಂದಿದ್ದಾರೆ ಅಕ್ಷಮ್ಯ ಅಪರಾಧ- ಈಶ್ವರ್ ಖಂಡ್ರೆ
ಬಳಿಕ ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ನನಗೆ ಇಲ್ಲಿಗೆ ರೈತನ ಶವ ತಂದಿರುವುದೇ ಗೊತ್ತಿಲ್ಲ. ನನಗಾಗಿ ಶವ ಇಲ್ಲಿಗೆ ತಂದಿದ್ದಾರೆ ಅಕ್ಷಮ್ಯ ಅಪರಾಧ. ನಾನು ಕ್ಷಮೆ ಕೇಳುತ್ತೇನೆ. ಅಂತವರ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದರು.
ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್ ಗಳಿಂದನೇ ಸಾವುಗಳು ಆಗುತ್ತಿವೆ ಅನ್ನೋ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಈ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದ್ದೇನೆ. ಈ ಕುರಿತು ಸಭೆ ಮಾಡುತ್ತೇನೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಇಡೀ ಸರ್ಕಾರವೇ ಸಂತಾಪ ಹಾಗೂ ಶೋಕದಲ್ಲಿದೆ. ಮೃತನ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಹೇಳಿದರು.
Key words: Tiger, attack, Farmers, outraged, Minister, Ishwar Khandre







