ನಿವೇಶನ ಮಾಲೀಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲು.

 

ಮೈಸೂರು, ಮೇ 29, 2020 : (www.justkannada.in news ) : ನಿವೇಶನವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪೊಂದು ನಿವೇಶನದ ಮಾಲೀಕ ಹಾಗೂ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ನಗರದ ಸರಸ್ವತಿಪರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕ ಲಕ್ಕೇಗೌಡ, ಅವರ ಪತ್ನಿ ಮರಿಯಮ್ಮ, ಮಕ್ಕಳಾದ ಭರತ್ ರಾಜ್ ಹಾಗೂ ಗುರುರಾಜ್ ಹಲ್ಲೆಗೊಳಗಾದವರು.

ಲಕ್ಕೇಗೌಡ ಹಾಗೂ ಪತ್ನಿ ಮರಿಯಮ್ಮ ಕೆ.ಆರ್. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಹಲ್ಲೆ ಮಾಡಿದ ತೊಣಚಿಕೊಪ್ಪಲು ನಿವಾಸಿಗಳಾದ ನಾಗಣ್ಣ, ನಿಂಗಪ್ಪ, ಭಾಸ್ಕರ, ಈಶ್ವರ, ಬೀರಪ್ಪ, ಶಿವ, ಹರೀಶ, ಅರುಣ ಹಾಗೂ ರವಿ ಎಂಬವರ ವಿರುದ್ಧ ಐಪಿಸಿ 1860(ಣ/ 141, 143, 147, 341, 323, 326, 354, 447, 504, 506, 149) ಕಾಯ್ದೆ ಅನ್ವಯ ನಗರದ ಸರಸ್ವತಿಪ್ಮರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mysore-saraswathipuram-police.station-assault-land-owner-murder-case-booked

ಘಟನೆ ವಿವರ:

ಲಕ್ಕೇಗೌಡ ಅವರು 1983ರ ಡಿಸೆಂಬರ್ 5ರಂದು ಕಸಬಾ ಹೋಬಳಿ, ಬೋಗಾದಿ ಸರ್ವೆ ನಂ 126/1ರಲ್ಲಿ 22 ಹಾಗೂ 23ನೇ ಸಂಖ್ಯೆಯ ನಿವೇಶನವನ್ನು ತೊಣಚಿಕೊಪ್ಪಲಿನ ಎಳೆಮೊಗೇಗೌಡ ಎಂಬವರಿಂದ ಖರೀದಿಸಿದ್ದರು. ಇದೇ ಮಾಹೆಯಲ್ಲಿ ಸದರಿ ಸರ್ವೆ ನಂಬರಿನ ಸೈಟ್ ನಂಬರ್ 39, 40 ಸಂಖ್ಯೆಯ ನಿವೇಶನಗಳನ್ನು ಎಳೆಮೊಗೇಗೌಡ ಅವರಿಂದ ಕೆ.ಆರ್.ನಗರದ ಅಣ್ಣೇಗೌಡ, ಜೆ.ಜಯಮ್ಮ ದಂಪತಿ ಖರೀದಿಸಿದ್ದರು. ತದನಂತರ ಅಣ್ಣೇಗೌಡ ದಂಪತಿ ನಿವೇಶನಗಳನ್ನು 1996ರ ಡಿಸೆಂಬರ್ 30ರಂದು ಮರಿಯಮ್ಮ ಹಾಗೂ ಎಚ್.ಎಲ್. ಮೋಹನರಾಜ್ ಅವರಿಗೆ ಮಾರಾಟ ಮಾಡಿದ್ದರು.

ನಿವೇಶನ ಕೊಂಡುಕೊಂಡ ಮರಿಯಮ್ಮ ಕುಟುಂಬದವರು ಸದರಿ ಜಾಗದಲ್ಲಿ ಕಲ್ನಾರು ಶೀಟಿನ ಮನೆ ಕಟ್ಟಿಕೊಂಡು ದಶಕಗಳ ಕಾಲ ವಾಸವಿದ್ದರು. ಇತ್ತೀಚೆಗೆ ಲಕ್ಕೇಗೌಡ ಅವರು ಕಲ್ನಾರು ಶೀಟಿನ ಮನೆಗಳನ್ನು ಕೆಡವಿ ಆ ಜಾಗದಲ್ಲಿ ಹೊಸ ಮನೆಯನ್ನು ಕಟ್ಟುವ ಸಲುವಾಗಿ ಕೆಲಸ ಪ್ರಾರಂಭಿಸಬೇಕೆನ್ನುವ ವೇಳೆಗೆ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ ನಾಗಣ್ಣ, ನಿಂಗಪ್ಪ, ಭಾಸ್ಕರ, ಈಶ್ವರ, ಬೀರಪ್ಪ, ಶಿವ, ಹರೀಶ, ಅರುಣ ಹಾಗೂ ರವಿ ಎಂಬವರು ಲಕ್ಕೇಗೌಡ, ಮರಿಯಮ್ಮ, ಭರತ್ ರಾಜ್ ಹಾಗೂ ಗುರುರಾಜ್ ಅವರುಗಳ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸ್ಥಳೀಯರು ಕೂಡಲೇ ಮಧ್ಯೆ ಪ್ರವೇಶಿಸಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ತದನಂತರ ಆರೋಪಿಗಳು, ಈ ಜಾಗದತ್ತ ಮತ್ತೊಮ್ಮೆ ಸುಳಿದರೆ, ಇಡೀ ಕುಟುಂಬವನ್ನೇ ಸರ್ವನಾಶ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಗುರುರಾಜ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Mysore-saraswathipuram-police.station-assault-land-owner-murder-case-booked

ಘಟನೆ ಸಂಬಂಧ ಕೊಲೆ ಬೆದರಿಕೆ(506), ಅವಾಚ್ಯ ಶಬ್ಧಗಳಿಂದ ನಿಂದನೆ(504), ನಿವೇಶನಕ್ಕೆ ಅತಿಕ್ರಮ ಪ್ರವೇಶ(447), ಹೆಣ್ಣುಮಕ್ಕಳ ಮೇಲೆ ದೈಹಿಕ ಹಲ್ಲೆ(354) ತೀವ್ರತರವಾದ ಹಲ್ಲೆ(326) ಹಾಗೂ ಅಡ್ಡಗಟ್ಟಿ ಧಮಕಿ ಹಾಕಿರುವ(341) ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

 

oooo

key words : Mysore-saraswathipuram-police.station-assault-land-owner-murder-case-booked