Sunday, October 4, 2026

BDA Apartments

Home Front Page ಮೈಸೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಮೇ,20,2026 (www.justkannada.in): ಕುಡಿಯುವ ನೀರಿನ ಸಮರ್ಪಕ ಪೂರೈಕೆ  ಮಾಡಲು ಆಗ್ರಹಿಸಿ ಹೆಗ್ಗಡದೇವನಕೋಟೆ ತಾಲೂಕಿನ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಳದ ಹಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಎನ್ ಬೇಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು AIJASC (ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ) ನೇತೃತ್ವದಲ್ಲಿ ಪ್ರತಿಭಟನೆ  ನಡೆಸಲಾಯಿತು.  ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜು ಅವರು “ಇಂದೇ ಬೋರ್ ವೆಲ್(ಕೈಪಂಪ್) ಅನ್ನು ರಿಪೇರಿ ಮಾಡಿಸಲಾಗುವುದು. ಹಾಗೂ  ಮೋಟಾರ್ ರಿಪೇರಿಗೆ ಕೆಲಸ ನಡೆಯುತ್ತಿದ್ದು ನಾಳೆಯೊಳಗೆ ನೀರು ಪೂರೈಕೆ ಆಗುತ್ತದೆ ಇಲ್ಲವಾದರೆ ನಾಳೆಯಿಂದ ಟ್ಯಾಂಕರ್ ಮೂಲಕ ನೀರನ್ನು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಗ್ರಾಮದ ಮಹಿಳೆ ಭಾಗ್ಯ ಎಂಬುವವರು ಮಾತನಾಡಿ ” ಕಳೆದ ಮೂರು ತಿಂಗಳಿಂದಲೂ ಸಹ ಪದೇಪದೇ ಕುಡಿಯೋ ನೀರಿನ ಸಮಸ್ಯೆಯಾಗುತ್ತಿದ್ದು,  ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಬರುವ ನಮ್ಮಂತ ಬಡ ಆದಿವಾಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಸಹ ಮಾಡದಿದ್ದರೆ ಬಹಳ ತೊಂದರೆಯಾಗುತ್ತಿದೆ, ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಇದುವರೆಗೂ ಗಮನ ಹರಿಸುತ್ತಿಲ್ಲ ಹಾಗಾಗಿ ಇಂದು ಪ್ರತಿಭಟನೆ ಮಾಡಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳಿದಂತೆ ಇಂದು ನಾಳೆಯೊಳಗೆ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಗ್ರಾಮ ಪಂಚಾಯತಿಯ ಮುಂದೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ಮುಖಂಡ ಸುನಿಲ್  ಮಾತನಾಡಿ,  ಕಬಿನಿ ಹಿನ್ನೀರಿನ ಪ್ರದೇಶ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಮಾಳದ ಹಾಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಿರ್ಲಕ್ಷ ತೋರುತ್ತಿರುವುದು ಖಂಡನೀಯ.  ಈ ಕೂಡಲೇ ಕೈ ಪಂಪನ್ನು ರಿಪೇರಿ ಮಾಡಬೇಕು.  ಹಾಗೆಯೇ  ಮೋಟಾರನ್ನು ರಿಪೇರಿ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮೂಲಭೂತ ಸೌಕರ್ಯಗಳಾದ ರಸ್ತೆ,ಚರಂಡಿ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.ಮೈಸೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ jk02_new jk02 new

ಮಾಳದ ಹಾಡಿ ಗ್ರಾಮಸ್ಥರಾದ ನಾಗಮ್ಮ, ಬಸಮ್ಮ, ಜ್ಯೋತಿ , ಭಾಗ್ಯ ಗಂಗೆ, ನವೀನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Key words: Mysore,  Protest, supply, drinking water