Wednesday, August 19, 2026

BDA Apartments

Home Front Page ಯೂಟ್ಯೂಬರ್‌ ಗಳಿಗೂ ಪೊಲೀಸ್‌ ನಿಗಾ?  ಸಾಮಾಜಿಕ ಮಾಧ್ಯಮಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಖಡಕ್ ಎಚ್ಚರಿಕೆ

ಯೂಟ್ಯೂಬರ್‌ ಗಳಿಗೂ ಪೊಲೀಸ್‌ ನಿಗಾ?  ಸಾಮಾಜಿಕ ಮಾಧ್ಯಮಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಖಡಕ್ ಎಚ್ಚರಿಕೆ

ಮೈಸೂರು,ಆಗಸ್ಟ್,19,2026 (www.justkannada.in):  ಸಾಮಾಜಿಕ ಮಾಧ್ಯಮದ ಮೂಲಕ ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನು ತಲುಪುವ ಸಾಮರ್ಥ್ಯವಿರುವ ಯೂಟ್ಯೂಬ್‌ ಹಾಗೂ ರೀಲ್ಸ್‌ ಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, “ಒಂದು ಸಣ್ಣ ರೀಲ್ಸ್ ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಯನ್ನು ತಲುಪುತ್ತದೆ. ಜನಾಭಿಪ್ರಾಯವನ್ನೇ ರೂಪಿಸುವ ಶಕ್ತಿ ಸಾಮಾಜಿಕ ಮಾಧ್ಯಮಕ್ಕಿದೆ. ಹೀಗಾಗಿ ಅದನ್ನು ಬಳಸುವ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಒಳ್ಳೆಯ ಸುದ್ದಿಗಳ ಜತೆಗೆ ಕೆಟ್ಟ ಸುದ್ದಿಗಳೂ ಹರಿದಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮದ ಬೆಳವಣಿಗೆಗಳು ಪೊಲೀಸ್ ಇಲಾಖೆಯ ಮೇಲೂ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರಿಗೂ ಸಮಸ್ಯೆ ಉಂಟುಮಾಡುತ್ತಿವೆ. ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ಅಗತ್ಯವಿದೆ ಎಂದರು.

ಯೂಟ್ಯೂಬರ್‌ ಗಳ ಮೇಲೂ ನಿಗಾ ವಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಸ್ಪಷ್ಟಪಡಿಸಿದರು.

ಮೈಸೂರು ಮಾಧ್ಯಮ ಕ್ಷೇತ್ರ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಳ್ಳೆಯದು-ಕೆಟ್ಟದ್ದನ್ನು ಅರಿತು ಸುದ್ದಿ ಪ್ರಕಟಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಸಮಾಜದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಆದರೆ ಯಾರೂ ತಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಛಾಯಾಗ್ರಹಣದ ಮಹತ್ವವನ್ನು ಬಣ್ಣಿಸಿದ ಸೀಮಾ ಲಾಟ್ಕರ್, ಒಂದೇ ಚಿತ್ರದಲ್ಲಿ ನಗು, ಅಳು, ನೋವು, ಸಂಭ್ರಮ, ದುರಂತ ಸೇರಿದಂತೆ ಬದುಕಿನ ವಿವಿಧ ಮಜಲುಗಳನ್ನು ಸೆರೆಹಿಡಿಯುವ ಶಕ್ತಿ ಛಾಯಾಗ್ರಹಣಕ್ಕಿದೆ ಎಂದರು.

ಪ್ರದರ್ಶನದಲ್ಲಿದ್ದ ಬೆಂಕಿ, ಮಳೆ, ನಗು, ಅಳು, ಸಂಭ್ರಮ ಹಾಗೂ ಸೂತಕದ ವಿವಿಧ ಚಿತ್ರಗಳ ನಡುವೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿರುವ ಚಿತ್ರಕ್ಕೆ ಮೊದಲ ಬಹುಮಾನ ಬಂದಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ ಎಂದು  ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಹೇಳಿದರು.

ಸಾಮಾಜಿಕ ಮಾಧ್ಯಮಕ್ಕೆ ಕಡಿವಾಣವೇ? ಅಥವಾ ಜವಾಬ್ದಾರಿಯ ಪಾಠವೇ?  ಕಮಿಷನರ್ ಹೇಳಿಕೆ ಇದೀಗ ಮೈಸೂರಿನ ಡಿಜಿಟಲ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ENGLISH SUMMARY…

Mysuru Police to Keep Watch on YouTubers: Commissioner Seema Latkar

Mysuru: City Police Commissioner Seema Latkar said the police will take appropriate measures to monitor YouTubers and social media content in the coming days.

Speaking at a World Photography Day event, she said social media has the power to influence public opinion, with reels reaching millions within seconds.

She urged content creators to act responsibly, noting that misleading or harmful social media posts can create problems for both the public and the police department.

Latkar also praised Mysuru’s media for maintaining responsibility while reporting news.

Key words: Mysuru Police,  Keep, Watch, YouTubers, Commissioner, Seema Latkar