ಸಂಗೀತ ವಿವಿ : ದಶಮಾನೋತ್ಸವ ವರ್ಷಾಚರಣೆಯ ಸಂಸ್ಥಾಪನಾ ದಿನಾಚರಣೆ

 

ಮೈಸೂರು, ಅ.04, 2019 : (www.justkannada.in news ) : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ದಶಮಾನೋತ್ಸವ ವರ್ಷಾಚರಣೆಯ ಸಂಸ್ಥಾಪನಾ ದಿನಾಚರಣೆ ಸೋಮವಾರ ಆಯೋಜಿಸಲಾಗಿತ್ತು.

ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ,  ಸಂಗೀತ ವಿಶ್ವವಿದ್ಯಾನಿಲಯವು ಮುಂದಿನ ಯೋಜನೆಗಳ ಮುನ್ನೋಟ ನೋಡುವ ಜೊತೆಗೆ ಕಳೆದ ಹತ್ತು ವರ್ಷದ ಹಿನ್ನೆಲೆಯನ್ನೂ ಮೆಲುಕು ಹಾಕಬೇಕು. ಸಂಗೀತ ಕೇಳುವಾಗ ಸಂತೋಷ ಉಂಟಾಗುತ್ತದೆ. ದೇವರನ್ನು ಪ್ರಾರ್ಥಿಸುವ ಮತ್ತು ಆರಾಧಿಸುವ ಮಾರ್ಗ ಇದಾಗಿದೆ. ಸಂಗೀತ ವಿವಿಯ ದಶಮಾನೋತ್ಸವ ಸಂದರ್ಭದಲ್ಲಿ ಅದರ ಮುಂದಿನ ಕಾರ್ಯ ಯೋಜನೆಗಳ ಜತೆಗೆ ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆಯ ಕುರಿತೂ ಮೆಲುಕು ಹಾಕಬೇಕು ಎಂದರು.

ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಮಾತನಾಡಿ, ಸಂಗೀತ ವಿಶ್ವವಿದ್ಯಾನಿಲಯಕ್ಕೆ ನೇಮಕಾತಿ ಮಾಡುವಾಗ ತಜ್ಞರನ್ನು ಮತ್ತು ಸರಿಯಾಗಿ ಸಂಗೀತ ಹೇಳಿಕೊಡುವವರನ್ನು ನೇಮಿಸಬೇಕು. ಏಕೆಂದರೆ ಸಂಗೀತ ಎಂಬುದು ಎಂಜಿನಿಯರಿಂಗ್, ಮೆಡಿಕಲ್ನಂತೆ ಅಲ್ಲ. ಅದನ್ನು ಶಾಸ್ತ್ರೀಯ ಬದ್ಧವಾಗಿ ಮತ್ತು ಸಂಪೂರ್ಣ ಮನಸ್ಸಿಟ್ಟು ಕಲಿಯಬೇಕು. ಹಾಗೆಯೇ ಹೇಳಿಕೊಡುವ ಗುರುಗಳೂ ಸಹ ಸರಿಯಾಗಿ ಹೇಳಿಕೊಡಬೇಕು. ಒಮ್ಮೆ ತಪ್ಪಾಗಿ ಕಲಿತುಬಿಟ್ಟರೆ ಮುಂದೆ ಎಲ್ಲ ಸಂದರ್ಭದಲ್ಲಿಯೂ ತಪ್ಪೇ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ, ಖ್ಯಾತ ಹಿಂದೂಸ್ತಾನಿ ಗಾಯಕ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ್, ವಿದ್ವಾನ್ ವಿಜಯ ರಾಘವನ್, ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್, ತಬಲಾ ವಾದಕ ಪಂಡಿತ್ ರಾಚಯ್ಯ ಹಿರೇಮಠ್, ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಕುಮಾರ ದಾಸ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಬೇಕಿದ್ದ `ರತನಾಟ್ಯ ಕಲಾವಿದೆ ವಿದುಷಿ ವಸಂತಲಕ್ಷ್ಮೀ ಗೈರಾಗಿದ್ದರು. ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

key words : mysore-music-university-foundation-day-celebration-mysore