ಮೈಸೂರು,ಆಗಸ್ಟ್,25,2025 (www.justkannada.in): ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನ ಕೊಲೆ ಮಾಡಿ ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು ಭೇರ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ(20) ಕೊಲೆಯಾದ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತನೇ ಈ ಕೃತ್ಯವೆಸಗಿರುವುದು.
ಕೇರಳ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ರಕ್ಷಿತಾ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಮಧ್ಯೆ ಆರೋಪಿ ಸಿದ್ದರಾಜು ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಕರೆದಿದ್ದು ನಂತರ ಲಾಡ್ಜ್ ನಲ್ಲಿ ಮಹಿಳೆ ರಕ್ಷಿತಾಳನ್ನ ಕೊಲೆ ಮಾಡಿ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದ.
ಈ ವೇಳೆ ಅಲ್ಲಿಗೆ ಬಂದ ಲಾಡ್ಜ್ ನ ಸಿಬ್ಬಂದಿ ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಅನುಮಾನ ವ್ಯಕ್ತಪಡಿಸಿದ್ದು ಈ ಸಮಯದಲ್ಲಿ ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಆರೋಪಿ ಸಿದ್ದರಾಜು ಸುಳ್ಳು ಹೇಳಿದ್ದ. ಕಿಟಕಿಯಿಂದ ಎಸೆದಿರುವುದಾಗಿ ತಿಳಿಸಿ ಸಿದ್ದರಾಜು ಪರಾರಿಯಾಗಲು ಯತ್ನಿಸಿದ್ದ.
ಈ ವೇಳೆ ಸಿಬ್ಬಂದಿ ಹುಡುಕಾಟ ನಡೆಸಿದರೂ ಮೊಬೈಲ್ ಸಿಗದ ಹಿನ್ನೆಲೆಯಲ್ಲಿ ಅನುಮಾನ ಬಂದು ಪೊಲೀಸರಿಗೆ ಪೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಸಿದ್ದರಾಜು ಅಸಲಿ ವಿಷಯ ಕಕ್ಕಿದ್ದಾನೆ. ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: mysore, man, murdered, woman