ಪ್ರತಾಪ್ ಸಿಂಹ ಬಗ್ಗೆ ಅನುಮಾನ ಪಡಬೇಕಿಲ್ಲ: ಯದುವೀರ್ ಗೆಲ್ಲುತ್ತಾರೆ- ಡಾ.ಸಿ.ಎನ್ ಅಶ್ವಥ್ ನಾರಾಯಣ್.

ಮೈಸೂರು,ಮಾರ್ಚ್,20,2024(www.justkannada.in): ಲೋಕಸಭೆ ಚುನಾವಣೆಗೆ ಟಿಕೆಟ್ ಕೈ ತಪ್ಪಿರುವ ಕಾರಣ ಸಹಜವಾಗಿಯೇ ಬೇಜಾರು ಇರುತ್ತೆ. ಆದರೆ ನಾನು ಮೋದಿ ಪರವಾಗಿ ಕೆಲಸ ಮಾಡುತ್ತೇನೆ ಅಂತಾ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ಪ್ರತಾಪ್ ಸಿಂಹ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸಿಎನ್ ಅಶ್ವಥ್ ನಾರಾಯಣ್, ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಗೊಂದಲ‌ ಇಲ್ಲ.  ಜೆಡಿಎಸ್‌ ನವರು ಮೂರು ಸೀಟು ಕೇಳಿದ್ದರು‌.  ವರಿಷ್ಠರ ಹಂತದಲ್ಲಿ ಎಲ್ಲವೂ ತೀರ್ಮಾನ ಆಗಲಿದೆ.  ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರನ್ನೂ ರಾಜ್ಯಾದ್ಯಂತ ಪಕ್ಷದ ಪ್ರಚಾರಗಳಿಗೆ ಆಹ್ವಾನಿಸಲಾಗುವುದು. ಮೈಸೂರು ಅಭ್ಯರ್ಥಿ ಯದುವೀರ್ ಪ್ರಚಾರ  ಪ್ರಾರಂಭ ಮಾಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅವರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಕೇಳಿದ್ದಾರೆ.  ಸಭೆ ನಡೆಸಿ ಒಟ್ಟಿಗೆ ಪ್ರಚಾರ ಶುರು ಮಾಡಲು ತೀರ್ಮಾನಿಸಲಾಗಿತ್ತು.  ಈ ನಡುವೆ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರಾದ ಹರೀಶ್‌ಗೌಡ, ಮಹದೇವು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

ಮಾಡಿರುವ ಕೆಲಸವನ್ನು ಹೇಳಿಕೊಂಡರೆ ತಪ್ಪೇನು ?

ರಾಜಮನೆತನದ ಬಗ್ಗೆ ಜನರಿಗೆ ಗೌರವ ಇದೆ. ನಮ್ಮ ಅಭ್ಯರ್ಥಿ ಯದುವೀರ್ ಗೆಲುವು ಸಾಧಿಸಲಿದ್ದಾರೆ. ಪ್ರತಾಪ್ ಸಿಂಹ ಒಳ್ಳೆಯ ಕೆಲಸ ಮಾಡಿದ್ದಾರೆ. ಮಾಡಿರುವ ಕೆಲಸವನ್ನು ಹೇಳಿಕೊಂಡರೆ ತಪ್ಪೇನು ? ಎಂದು ಸಂಸದ ಪ್ರತಾಪ್ ಸಿಂಹ ಅವರನ್ನ ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡರು.

ಟಿಕೆಟ್ ತಪ್ಪಿರುವ ಕಾರಣ ಸಹಜವಾಗಿಯೇ ಬೇಜಾರು ಇರುತ್ತೆ. ಎಲ್ಲವೂ ಬೆಳಗ್ಗೆ ಆಗುವಷ್ಟರಲ್ಲಿ ಸರಿ ಆಗಿಬಿಡೋದಿಲ್ಲ.  ಆದ್ರೆ ನಾನು ಮೋದಿ ಪರವಾಗಿ ಕೆಲಸ ಮಾಡುತ್ತೇನೆ ಅಂತ ಬಹಿರಂಗವಾಗಿ ಹೇಳಿದ್ದಾರೆ.  ಆದ್ದರಿಂದ ಪ್ರತಾಪ್ ಸಿಂಹ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

ಟಿಕೆಟ್ ವಂಚಿತರು ಬಹಿರಂಗ ಅಸಮಾಧಾನ: ಚುನಾವಣೆ ಮೇಲೆ ಪರಿಣಾಮ..

ಟಿಕೆಟ್ ವಂಚಿತ ಸಂಸದರು, ಹಿರಿಯ ನಾಯಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಭ್ಯರ್ಥಿಗಳನ್ನು ಘೋಷಿಸುವ ಮುನ್ನಾ ಟಿಕೆಟ್ ಆಕಾಂಕ್ಷಿಗಳನ್ನು ಪಕ್ಷ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಟಿಕೆಟ್ ಆಕಾಂಕ್ಷಿತರ ಜೊತೆ ಮಾತುಕತೆ ‌ನಡೆಸಿದ ಬಳಿಕ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿತ್ತು‌. ಇದೀಗ ಟಿಕೆಟ್ ವಂಚಿತ ಸಂಸದರು, ಹಿರಿಯ ನಾಯಕರು ಅಸಮಾಧಾನ ಹೊರಹಾಕ್ತಿದ್ದಾರೆ. ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ. ಈ ಬೆಳವಣಿಗೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಆದರೆ ಅಂತಿಮವಾಗಿ ಜನರು ನರೇಂದ್ರ ಮೋದಿ ನಾಯಕತ್ವ ಬೆಂಬಲಿಸುತ್ತಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಹಾಗಾಗಿ ಯಾರು ಕೂಡ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗುವುದಿಲ್ಲ ಎಂದು ಮಾಜಿ ಸಚಿವ ಡಾ ಅಶ್ವಥ್ ನಾರಾಯಣ್ ಹೇಳಿದರು.

Key words: mysore-MP-Pratap Simha-Yaduveer -will -win- Dr.CN Aswath Narayan.