ಶಾಲೆ ಪ್ರಾರಂಭ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೆಚ್.ವಿಶ್ವನಾಥ್ ವಿರೋಧ: ಶಿಕ್ಷಣ ಸಚಿವರ ವಿರುದ್ಧ ವಾಗ್ದಾಳಿ.

0
230

ಮೈಸೂರು,ಜೂನ್,29,2021(www.justkannada.in):  ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಶಾಲೆ ಆರಂಭ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.jk

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಅವೈಜ್ಞಾನಿಕವಾಗಿ ಶಾಲೆ ತೆರೆಯೋದು ಬೇಡ. ಮಕ್ಕಳ ವಿಚಾರದಲ್ಲಿ ಬೇಜವಾಬ್ದಾರಿ ಬೇಡ ಎಂದರು.

ಇದು ಮಗುವನ್ನು ಮರೆತ ಸರ್ಕಾರ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವ ಹಿನ್ನೆಲೆ  ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ಪರೀಕ್ಷೆ ನಡೆಸೋದು ಮಗುವನ್ನು ಸಾವಿನ ಕೂಪಕ್ಕೆ ತಳ್ಳಿದಂತೆ. ಇನ್ನು 10- 15 ದಿನಗಳಲ್ಲಿ ಡೆಲ್ಟಾ, ಮೂರನೇ ಅಲೆ ಶುರುವಾಗುತ್ತೆ ಅಂತಿದ್ದಾರೆ.  ಅದೇ ಸಂದರ್ಭಕ್ಕೆ ಪರೀಕ್ಷೆ ನಿಗದಿಯಾಗಿದೆ.  ಮಕ್ಕಳ ಕಥೆ ಏನಾಗಬೇಕು? ಕೋವಿಡ್ ಹೊಸ ಸಮಸ್ಯೆ. ನಾವು ಹೇಳಿದ್ದೇ ನಡೆಯಬೇಕು ಅನ್ನುವ ಇಗೋ ಇರಬಾರದು. ಇದು ಮಗುವನ್ನು ಮರೆತ ಸರ್ಕಾರ ಎಂದು ಟೀಕಿಸಿದರು.

ಶಿಕ್ಷಣ ಸಚಿವರದ್ದು ಇದೆಂಥಾ ಇಗೋ.? ಯಾವ ಹಠಕ್ಕೆ ಪರೀಕ್ಷೆ ಮಾಡುತ್ತಿದ್ದೀರಿ.?

ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ, ಆಯುಕ್ತರಾಗಿ ಕೆಲಸ ಮಾಡಿದ ಅಧಿಕಾರಿಗಳು ಇದ್ದಾರೆ. ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ತನ್ವೀರ್ ಸೇಠ್, ನಾನು ಸೇರಿದಂತೆ ಅನೇಕರು ಇದ್ದೇವೆ. ಪ್ರತಿಪಕ್ಷದವರನ್ನೂ ಸೇರಿದಂತೆ ಯಾರನ್ನೂ ಕರೆದು ಅಭಿಪ್ರಾಯ ಕೇಳಿಲ್ಲ. ಏನೂ ಮಕ್ಕಳನ್ನು ಸಾಯಿಸಬೇಕು ಅಂತ ಮಾಡಿದ್ದೀರಾ.? ಶಿಕ್ಷಕರು, ಪೋಷಕರ ಜೀವ ಬಲಿ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ಯಾರೂ ಕೊಟ್ಟಿಲ್ಲ ಶಿಕ್ಷಣ ಸಚಿವರದ್ದು ಇದೆಂಥಾ ಇಗೋ.? ಈ ಹಠ ಯಾಕೆ.? ಯಾವ ಹಠಕ್ಕೆ ಪರೀಕ್ಷೆ ಮಾಡುತ್ತಿದ್ದೀರಿ.? ಎಂದು ಸಚಿವ ಸುರೇಶ್ ಕುಮಾರ್ ಗೆ ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಸಿಬಿಎಸ್ ಸಿ ಪರೀಕ್ಷೆಯನ್ನೆ ರದ್ದು ಮಾಡಿದೆ. ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಅಂತ ಹೇಳಿದೆ. ಆದರೆ ರಾಜ್ಯದಲ್ಲಿ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡಲಾಗುತ್ತಿದೆ. ಜೀವ ಮತ್ತು ಜೀವನ ಎರಡನ್ನು ತೆಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿಯವರೇ ಜೀವ ಮುಖ್ಯ ನಂತರ ಜೀವನ ಅಂತ ಹೇಳಿದ್ದಾರೆ. ಆದ್ರೆ ಸಚಿವ ಸುರೇಶ್ ಕುಮಾರ್ ನನಗೆ ಎಲ್ಲ ಗೊತ್ತು ಎಂಬ ಇಗೋ ಇದೆ ಇಂತಹ ಇಗೋ ಇರಬಾರದು ಎಂದು ಸಚಿವ ಸುರೇಶ್ ಕುಮಾರ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಕೆಲವು ತಜ್ಞರು ಸರ್ಕಾರದ‌ ಮರ್ಜಿನಲ್ಲಿದ್ದಾರೆ. ಡಾ.ದೇವಿಶೆಟ್ಟಿಯವರೆ ಮೂರನೇ ಅಲೆ ಬರುತ್ತೆ ಅಂತಾರೆ. ಆದರೆ ಪರೀಕ್ಷೆ ಮಾಡಬಹುದು ಅಂತಾರೆ. ದೇವಿಶೆಟ್ಟಿಯವರು ಎರಡೂ ಹೇಳಿಕೆಯನ್ನು ಕೊಡುತ್ತಿದ್ದಾರೆ. ಯಾಕಾಗಿ ಈ ರೀತಿ ಹೇಳುತ್ತಿದ್ದಾರೆ ಗೊತ್ತಿಲ್ಲ. ಜೀವವನ್ನು ರಕ್ಷಿಸುವ ಕೆಲಸವಾಗಬೇಕು. ಸುಧಾಕರ್ ರವರಿಗೆ ಪರೀಕ್ಷೆ ವಿಚಾರ ಗೊತ್ತಿಲ್ಲ ಅಂತಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ ಎಂದು ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಕಾಸರಗೋಡು ಜಿಲ್ಲೆ ನಮ್ಮದೇ, ‌ರಾಜ್ಯ ಸರ್ಕಾರ ಈ ವಿಚಾರದಲ್ಲಿ ಪತ್ರ ಬರೆದು ಸುಮ್ಮನಾಗುವುದಲ್ಲ..

ಕಾಸರಗೋಡು ಭಾಗದಲ್ಲಿ ಕೆಲ ಗ್ರಾಮಗಳಲ್ಲಿ ಕನ್ನಡ ನಾಮಫಲಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಕಾಸರಗೋಡು ಜಿಲ್ಲೆ ನಮ್ಮದೇ, ‌ರಾಜ್ಯ ಸರ್ಕಾರ ಈ ವಿಚಾರದಲ್ಲಿ ಪತ್ರ ಬರೆದು ಸುಮ್ಮನಾಗುವುದಲ್ಲ. ಮಂಜೇಶ್ವರ ಶಾಸಕ ಅಶ್ರಫ್ ಕನ್ನಡದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಕಾಸರಗೋಡು ಉಳಿವಿಗೆ ರಾಜ್ಯ ಸರ್ಕಾರ ಮುಂದಾಗಬೇಕು‌ ಎಂದು ಹೇಳಿದರು.

Key words: mysore- MLC- H.Vishwanath –Oppose- School Openinn – SSLC- Examination