ಸಂತ್ರಸ್ತರ ಸಮಸ್ಯೆ ‘ನೆಪ’ ; ನಾಗರಹೊಳೆಯಲ್ಲಿ ಕುಟುಂಬ ಸಮೇತ ಸಚಿವರು ಮಾಡಿದ್ರು ಸಫಾರಿಯ ‘ಜಪ’..

 

ಎಚ್.ಡಿ.ಕೋಟೆ,ಅ.30 – ತಾಲ್ಲೂಕಿನ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವ ನೆಪದಲ್ಲಿ ಕುಟುಂಬ ಸಮೇತರಾಗಿ ಕಬಿನಿ ಹಿನ್ನೀರಿನ ಕಾರಾಪುರ ರೆಸಾರ್ಟ್‌ನಲ್ಲಿ ಉಳಿದು ದೀಪಾವಳಿ ಹಬ್ಬದ ಮಜಾ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನಡೆಗೆ ತಾಲ್ಲೂಕಿನ ಜನತೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಾಲ್ಲೂಕಿನಲ್ಲಿ ಕಳೆದೆರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ಭಾಗಗಳಲ್ಲಿ ರಸ್ತೆ, ಸೇತುವೆ, ಮನೆ, ರೈತರ ಬೆಳೆ ಸೇರಿದಂತೆ ಇನ್ನಿತರ ಪ್ರದೇಶಗಳು ಹಾನಿಯಾಗಿ ಕೋಟ್ಯಂತರ ರೂ. ನಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ತಹಸಿಲ್ದಾರ್ ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಶ್ರೀನಿವಾಸ ಪ್ರಸಾದ್, ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಶಾಸಕ ಕೋಟೆ ಶಿವಣ್ಣ, ಸಿದ್ದರಾಜು, ಚಿಕ್ಕಣ್ಣ ಮತ್ತಿತರರು ಈ ಹಿಂದೆ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದರು.
ನೆರೆ ಸಂತ್ರಸ್ತರ ಸ್ಥಿತಿಗತಿಗಳು, ಸೌಲಭ್ಯಗಳನ್ನು ನೀಡುವ ಬಗ್ಗೆ ಪರಿಶೀಲಿಸುವ ನೆಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ನೆರೆಸಂತ್ರಸ್ತರ ಪ್ರದೇಶಗಳಿಗೆ ತೆರಳಲು ಪ್ರವಾಸದ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗಿತ್ತು.
ಆದರೆ, ಪ್ರವಾಸ ಪಟ್ಟಿಯಲ್ಲಿರುವುದು ಒಂದು ರೀತಿಯಾದರೆ, ನಡೆದಿರುವುದೇ ಮತ್ತೊಂದು ರೀತಿಯದ್ದಾಗಿದೆ. ಅರಣ್ಯ ಇಲಾಖೆಯ ವಿಹಾರಧಾಮದಲ್ಲಿ ವಾಸ್ತವ್ಯ ಎಂದು ತಿಳಿಸಲಾಗಿತ್ತು. ಆದರೆ, ಜಂಗಲ್ ರೆಸಾರ್ಟ್‌ನಲ್ಲಿ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಿದ್ದು, ಪಟ್ಟಣದ ಕೇಂದ್ರ ಸ್ಥಾನದ ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿದ್ದ ಅಧಿಕಾರಿಗಳ ಸಭೆ ದಿಢೀರನೆ ರೆಸಾರ್ಟ್‌ಗೆ ಸ್ಥಳಾಂತರವಾಯಿತು. ಚಿಕ್ಕದೇವಮ್ಮ ಬೆಟ್ಟ ಮತ್ತು ಕುನ್ನಪಟ್ಟಣ ಪ್ರವಾಸ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.
ಭಾನುವಾರ ದಿನಪೂರ್ತಿ ಇದ್ದ ಪ್ರವಾಸದ ಕಾರ್ಯಕ್ರಮವನ್ನು ಸಚಿವರು ಮಧ್ಯಾಹ್ನ ೧ ಗಂಟೆಗೆ ಮೊಟಕುಗೊಳಿಸಿ ಜಂಗಲ್ ಲಾಡ್ಜಿನಲ್ಲಿ ವಾಸ್ತವ್ಯ ಹೂಡಿದ್ದ ಅವರ ಪತ್ನಿ, ಮಗ, ಸೊಸೆ ಜೊತೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳುವ ಜತೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಡೆಸುವ ಮೂಲಕ ವನ್ಯಜೀವಿಗಳನ್ನು ವೀಕ್ಷಿಸಿದ್ದಾರೆ. ಅಲ್ಲದೆ, ಕಬಿನಿ ಹಿನ್ನೀರಿನಲ್ಲಿ ಬೋಟಿಂಗ್ ಸಫಾರಿ ನಡೆಸಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಸೋಮವಾರ ಮಧ್ಯಾಹ್ನ ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದರು.

ಕೃಪೆ : ಆಂದೋಲನ

————-

key words : mysore-minister-v.somanna-saffari-nagarahole-forest