ಸಂಪುಟ ವಿಸ್ತರಣೆ ಬಗ್ಗೆ ಗೊತ್ತಿಲ್ಲ: ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ- ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ಫೆಬ್ರವರಿ,3,2022(www.justkannada.in): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಗಂಧವೂ ಗೊತ್ತಿಲ್ಲ ಗಾಳಿಯೂ ಗೊತ್ತಿಲ್ಲ. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಒಬ್ಬ ರಾಂಗ್ ವ್ಯಕ್ತಿಗೆ ನೀವು ಪ್ರಶ್ನೆ ಕೇಳುತ್ತಿದ್ದೀರಾ. ಈ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಮಾಹಿತಿ ಸಿಕ್ಕರೆ ನಿಮಗೆ ಮೊದಲು ಹೇಳುತ್ತೇನೆ. ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಅವರು ವಿಸ್ತರಣೆ ಆದರೂ ಮಾಡಬಹುದು ಪುನರ್‌ರಚನೆ ಆದರೂ ಮಾಡಬಹುದು. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ.

ಬಿಜೆಪಿ ಶಾಸಕರು ಸಚಿವರು ಸಂಪರ್ಕದಲ್ಲಿದ್ದಾರೆ ಎಂಬ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಅಲ್ಲಿದ್ದವರೇ ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗುವುದು ಸಾಮಾನ್ಯ ಎಂದರು.

ಶಾಸಕರು ಸಂಸದರ ನಡುವೆ ಮಾಹಿತಿ ವಿಚಾರವಾಗಿ ಗೊಂದಲ ಇದೆ

ಮೈಸೂರಿನಲ್ಲಿ ಗ್ಯಾಸ್ ಪೈಪ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಶಾಸಕರು ಸಂಸದರ ನಡುವೆ ಮಾಹಿತಿ ವಿಚಾರವಾಗಿ ಗೊಂದಲ ಇದೆ. ಇದನ್ನು ಸದ್ಯದಲ್ಲೇ ಬಗೆಹರಿಸಲಾಗುವುದು. ಖುದ್ದು ರಾಜ್ಯಾಧ್ಯಕ್ಷರು ಎಲ್ಲರನ್ನೂ ಕರೆದು ಮಾತನಾಡುತ್ತಾರೆ. ಯಾರು ಅನಗತ್ಯವಾಗಿ ಮಾತನಾಡದಂತೆ ಸೂಚಿಸಿದ್ದಾರೆ. ಅವರೇ ಸಮಸ್ಯೆ ಬಗೆಹರಿಸುವ ಹೊಣೆ ಹೊತ್ತಿದ್ದಾರೆ. ಈಗಾಗಿ ನಾನು ಮಧ್ಯ ಪ್ರವೇಶ ಮಾಡಿ ಸಭೆ ಮಾಡುವ ಅಗತ್ಯತೆ ಇಲ್ಲ. ಗೊಂದಲ ಉಂಟಾಗಿರುವುದು ಮಾಹಿತಿ ವಿಚಾರವಾಗಿ. ಪಾಲಿಕೆ ಆಯುಕ್ತರಿಗೆ ಪಾಸಿಟಿವ್ ಆಗಿದೆ. ದೂರವಾಣಿ ಮೂಲಕ ಈ ಬಗ್ಗೆ ಮಾತನಾಡಿದ್ದೇನೆ ಶ್ರೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಸಚಿವರು ಶಾಸಕರ ಕರೆ ಸ್ವೀಕರಿಸುತ್ತಿಲ್ಲ ಎಂಬ ಶಾಸಕ ಸೋಮಶೇಖರ್ ರಡ್ಡಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇದು ಸತ್ಯಕ್ಕೆ ದೂರವಾದ ವಿಚಾರ. ಸಚಿವ ಸಂಪುಟ ಸಭೆ ಕಾರ್ಯಕ್ರಮಗಳಲ್ಲಿ ಇದ್ದಾಗ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸಭೆಯ ನಂತರ ನಾವೇ ಸಂಪರ್ಕ ಮಾಡಿದ್ದೇವೆ. ಇಲ್ಲ ನಮ್ಮ ಆಪ್ತ ಸಹಾಯಕರು ಅಧಿಕಾರಿಗಳು ಸಂಪರ್ಕಿಸಿರುತ್ತಾರೆ. ಎಲ್ಲೋ ಒಂದು ಅಥವಾ ಎರಡು ಕರೆ ಈ ರೀತಿ ಆಗಿರಬಹುದು. ಯಾವ ಸಚಿವರು ಕರೆ ಸ್ವೀಕರಿಸಿಲ್ಲ ಅನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.

ಇನ್ನು ಅವ್ಯವಹಾರ ನಡೆದಿರುವ ಸಹಕಾರಿ ಬ್ಯಾಂಕ್ ಹಾಗೂ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ರಾಜ್ಯದಲ್ಲಿ 7 ಸಹಕಾರಿ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಬ್ಯಾಂಕ್ ಗಳ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದೇವೆ. ಅವ್ಯಹಾರ ನಡೆದಿರುವ ಸಹಕಾರ ಸಂಘ ಹಾಗೂ ಬ್ಯಾಂಕ್ ಗಳ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಸಹಕಾರ ಇಲಾಖೆಯ ಕಾನೂನನ್ನು ಮತ್ತಷ್ಟು  ಬಲಗೊಳಿಸಲು ಮುಂದಾಗಿದ್ದೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

Key words: mysore-minister-ST Somashekar