ಕಾಂಗ್ರೆಸ್ 40 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಎಂದ ಬಿಎಲ್ ಸಂತೋಷ್ ಗೆ ಸಚಿವ ಶಿವರಾಜ್ ತಂಗಡಗಿ ಸವಾಲು.

ಮೈಸೂರು,ಸೆಪ್ಟಂಬರ್,4,2023(www.justkannada.in):  ಕಾಂಗ್ರೆಸ್ ನ 40 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಗೆ ತಿರುಗೇಟು ನೀಡಿರುವ ಸಚಿವ ಶಿವರಾಜ ತಂಗಡಗಿ, ನಲವತ್ತಲ್ಲ,ಕೇವಲ ನಾಲ್ವರು ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಸವಾಲು ಹಾಕಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಶಿವರಾಜ ತಂಗಡಗಿ,  ಬಿಜೆಪಿ ಶಾಸಕರು, ಮುಖಂಡರುಗಳೇ ಕಾಂಗ್ರೆಸ್ ಗೆ ಬರಲು ಸಿದ್ದರಾಗಿದ್ದಾರೆ. ನಾವು ಆಪರೇಷನ್ ಹಸ್ತ ಮಾಡುವ ಅಗತ್ಯವಿಲ್ಲ. ಅವರಾಗಿಯೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಬಂದರೆ ಸ್ವಾಗತ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎನ್ನುವುದೇ ದೊಡ್ಡ ಸುಳ್ಳು. ಬಿಜೆಪಿಯವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿತು. ಆ ಬಳಿಕ ನನ್ನನ್ನು ಸೇರಿದಂತೆ ಐವರು ಪಕ್ಷೇತರ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿದರು. ಆ ನಂತರ ಪಕ್ಷೇತರ ಶಾಸಕರನ್ನೇ ಅನರ್ಹಗೊಳಿಸಲು ಮುಂದಾದರು. ಬಿಜೆಪಿಯವರು ಎಲ್ಲರನ್ನು ಬಳಸಿಕೊಂಡು ಬಿಸಾಡುತ್ತಾರೆ. ಹಾಗಾಗಿ ಯಾರು ಕೂಡ ಬಿಜೆಪಿಗೆ ಹೋಗುವುದಿಲ್ಲ. ರಾಜ್ಯದ ಉದ್ದಗಲಕ್ಕೂ ಎಲ್ಲಾ ಸಮುದಾಯದ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗುತ್ತಿದ್ದಾರೆ ಎಂದರು.

ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯದ ಕೊರತೆಯಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಸಚಿವರು ಹಾಗೂ ಶಾಸಕರ ನಡುವೆ ಯಾವುದೇ ರೀತಿಯ ಸಮನ್ವಯದ ಕೊರತೆಯಿಲ್ಲ, ಎಲ್ಲರೂ ಅನ್ಯೋನ್ಯವಾಗಿದ್ದೇವೆ. ಎಲ್ಲರೂ ಪ್ರೀತಿ ಸ್ನೇಹ ವಿಶ್ವಾಸದಿಂದ ಇದ್ದೇವೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿದೆಯಷ್ಟೇ. ಈ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದು ನಿಜ. ಪತ್ರ ಬರೆದ ಮಾತ್ರಕ್ಕೆ ಸಮನ್ವಯದ ಕೊರತೆಯಿದೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.

Key words: mysore- Minister –Shivraj tangadagi-challenge-BL Santhosh