ಗ್ರೇಟರ್ ಮೈಸೂರು:ಲ್ಯಾಂಡ್ ಮಾಫಿಯಾ ಮಾಡಲು ಹೊರಟಿರುವ ಒಂದು ಸಂಚು- ಮಾಜಿ ಮೇಯರ್ ಅಯೂಬ್ ಖಾನ್

ಮೈಸೂರು,ಸೆಪ್ಟಂಬರ್,4,2023(www.justkannada.in): ಗ್ರೇಟರ್ ಮೈಸೂರು ಮಾಡಲು ಹಲವು ಕಾನೂನು ಕಟ್ಟಲೆಗಳು ಇವೆ. ಅದೆಲ್ಲಾ ಬದಲಾಗಬೇಕಾಗುತ್ತದೆ. ಒಂದು ಸಮಗ್ರ ಅಧ್ಯಯನ ಮಾಡಿ ವರದಿ ತಯಾರಿಸಬೇಕು. ಕಾಟಾಚಾರಕ್ಕೆ ಮಹಾಪೌರರು ಕೊನೆಯ ಸಭೆಯಲ್ಲಿ ಮಾಡುವುದಕ್ಕೆ ಆಗುತ್ತಾ.? ಇದು ಕೆಲವು ವ್ಯಕ್ತಿಗಳ ಹಿತ ಕಾಪಾಡಲು ಮಾಡುತ್ತಿರುವ ಕೆಲಸ. ಇದು ಲ್ಯಾಂಡ್ ಮಾಫಿಯಾ ಮಾಡಲು ಹೊರಟಿರುವ ಒಂದು ಸಂಚು ಎಂದು ಮಾಜಿ ಮೇಯರ್ ಹಾಲಿ ಪಾಲಿಕೆ ಸದಸ್ಯ ಅಯೂಬ್ ಖಾನ್ ಆರೋಪಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಪಾಲಿಕೆ ಸದಸ್ಯ ಅಯೂಬ್ ಖಾನ್, 31 ನೇ ತಾರೀಖು ಕೌನ್ಸಿಲ್ ಸಭೆರದ್ದಿಗೆ ಆಯುಕ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಕಾರಣ ಎಂದು ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡಲು ಅವರಿಗೆ ಯಾವ ನೈತಿಕತೆ ಇದೆ. ಇದಕ್ಕೂ ಮೊದಲು ಇವರು ರಾತ್ರೋರಾತ್ರಿ ಹಲವು ಕೌನ್ಸಿಲ್ ಸಭೆಗಳನ್ನು ರದ್ದು ಮಾಡಿದ್ದಾರೆ. ಇದ್ದಕ್ಕಿದ್ದ ಹಾಗೆ ಚೇಂಬರ್ ಬಿಟ್ಟು ಹೋಗಿರುವ ಉದಾಹರಣೆ ಕೂಡ ಇದೆ. ಇವರು ರದ್ದು ಮಾಡಿದಾಗ ನಮ್ಮ 64 ಕಾರ್ಪೊರೇಟ್ ಗಳ ಹಕ್ಕು ಚ್ಯುತಿಯಾಗಿಲ್ವಾ.? ನಮ್ಮನ್ನು ಕೇಳಲು ಇವರಿಗೆ ಯಾವ ನೈತಿಕತೆ ಇದೆ ಎಂದು ಮೇಯರ್ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ಕೌನ್ಸಿಲ್ ಸಭೆಗೆ 7 ದಿನಗಳಿಗೂ ಮುಂಚೆ ಸದಸ್ಯರಿಗೆ ತಿಳಿಸಬೇಕು. ಆದರೆ ಇವರು 26 ನೇ ತಾರಿಖು ಸದಸ್ಯರಿಗೆ ತಿಳುವಳಿಕೆ ಪತ್ರ ಕೊಟ್ಟಿದ್ದಾರೆ. ದಿನಾಂಕವನ್ನು ತಿದ್ದಿ ಅಕ್ರಮ ಮಾಡಿದ್ದಾರೆ. ಇಂತಹ ಸಭೆ ರದ್ದು ಮಾಡಲು ಆಯುಕ್ತರಿಗೆ ಸಂಪೂರ್ಣ ಅಧಿಕಾರ ಇದೆ. ಹಾಗಾಗಿ ಆಯುಕ್ತರು ಸಭೆ ರದ್ದು ಮಾಡಿದ್ದಾರೆ ಎಂದರು.

ಮೇಯರ್ ,ಸಂಸದರೂ ಸೇರಿ ಗ್ರೇಟರ್ ಮೈಸೂರು ಬಗ್ಗೆ ಸಭೆ ಮಾಡಬೇಕಿತ್ತು ಇವರು ಉದ್ದೇಶ ಪೂರ್ವಕವಾಗಿ ಸಭೆ ರದ್ದು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಷ್ಟು ದಿವಸ ಎಲ್ಲಿ ಹೋಗಿದ್ರಿ.? ಮಲಗಿದ್ರಾ.? ಕೊನೆ ಸಭೆಯಲ್ಲಿ ಗ್ರೇಟರ್ ಮೈಸೂರು ಕುರಿತು ತೀರ್ಮಾನ ಮಾಡೋಕೆ ಆಗುತ್ತಾ.? ಮೈಸೂರು ಸದ್ಯಕ್ಕೆ 87 ಚ ಕಿ.ಮೀ. ಇವರು 187 ಚ.ಕಿ.ಮೀ ಗ್ರೇಟರ್ ಮೈಸೂರಿಗೆ ಸೇರಿಸಲು ಹೊರಟಿದ್ದಾರೆ. ಯಾವ ಆಧಾರದ ಮೇಲೆ ಗ್ರೇಟರ್ ಮೈಸೂರು ಮಾಡಲಿಕ್ಕೆ ಹೊರಟಿದ್ದಾರೆ ಎಂದು ಆಯೂಬ್ ಖಾನ್ ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಮಾಜಿ ಮೇಯರ್ ಅಯೂಬ್ ಖಾನ್, ಪ್ರತಾಪ್ ಸಿಂಹ ಅವರೇ ಸಿಎಂ ಸಿದ್ದರಾಮಯ್ಯ ನಿಮ್ಮ ಹಾಗೆ ಒಂದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಲ್ಲ. ಅವರಿಗೆ ಎಲ್ಲರೂ ಬೇಕು. ಅವರು ಬೇರೆಲ್ಲೂ ಮಾತನಾಡಿಲ್ಲ. ಅದು ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತನಾಡಿದ್ದಾರೆ. ಅಲ್ಲಿ ಹಿಂದು ಮುಸ್ಲಿಮ್ ಎಲ್ಲರೂ ಒಟ್ಟಾಗಿ ಅನೂನ್ಯವಾಗಿ ಬಾಳುತ್ತಿದ್ದೇವೆ. ಇಲ್ಲಿ ನಿಮ್ಮ ಕೊಡುಗೆ ಏನು.? ಜಾತಿ ಧರ್ಮದ ನಡುವೆ ವಿಷ ಬೀಜ ಬಿತ್ತುವುದನ್ನ ಬಿಡಿ. ಉದಯಗಿರಿ , ರಾಜೀವ್ ನಗರವೂ ನಿಮ್ಮ ವ್ಯಾಪ್ತಿಗೆ ಬರುತ್ತದೆ. ಸಮಯ ಬಂದಾಗ ನಾವು ಎಲ್ಲಾ ಕಡೆ ಬಂದು ನಿಮ್ಮನ್ನ ಯಾಕೆ ಸೋಲಿಸಬೇಕು ಅಂತ ಹೇಳುತ್ತೇವೆ ಎಂದು ಟಾಂಗ್ ನೀಡಿದರು.

Key words: Greater-Mysore- land mafia- mysore-former mayor -Ayub Khan