ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನಿಸಲು ನಾಳೆ ದುಂಡು ಮೇಜಿನ ಸಭೆ- ಕೆ.ಎಸ್.ಶಿವರಾಮು.

ಮೈಸೂರು,ಮಾರ್ಚ್,17,2022(www.justkannada.in):  ಸರ್ವೋಚ್ಛ ನ್ಯಾಯಾಲಯ ಹಿಂದುಳಿದ ವರ್ಗಗಳ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ರದ್ದುಪಡಿಸಿರುವ ಕುರಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲು ಮಾ. 19ರ ಶನಿವಾರ ಸಂಜೆ 4.30 ಗಂಟೆಗೆ ಮೈಸೂರು ನಗರದ ಜೆ.ಎಲ್.ಬಿ, ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್‌ ಹೊಟೇಲ್ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಶಿವರಾಮ್, ಈ ದುಂಡು ಮೇಜಿನ ಸಭೆಯಲ್ಲಿ ಪ್ರಮುಖವಾಗಿ ಕವಲುದಾರಿಯಲ್ಲಿರುವ ಹಿಂದುಳಿದವರ್ಗಗಳು, ಸ್ಥಳೀಯ ರಾಜಕೀಯ ಮೀಸಲಾತಿ ಕುರಿತು ಹಾಗೂ ಮೀಸಲಾತಿಯಿಂದ ವಂಚಿತರಾದರೆ ಹಿಂದುಳಿದ ವರ್ಗಗಳ ಸ್ಥಿತಿಗತಿ, ಸ್ಥಳೀಯ ರಾಜಕೀಯ ನಾಯಕತ್ವ ಮತ್ತು ಮುಂದಿನ ಹೋರಾಟದ ರೂಪುರೇಷೆಗಳನ್ನು  ರೂಪಿಸಲು ಈ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ. ಈ ದುಂಡು ಮೇಜಿನ ಸಭೆಗೆ  ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಡಿ.ತಿಮ್ಮಯ್ಯ, ಪ್ರೊ.ಬಿ.ಪಿ.ಮಹೇಶ್‌ ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್, ಮಾಜಿಪೌರರಾದ ಆರ್.ಅನಂತು, ಪ್ರೊ. ಕೆ.ಎಂ.ಜಯರಾಮಯ್ಯ, ಕರ್ನಾಟಕ ರಾಜ್ಯ ಹಿಂದುಳಿದವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಸಮುದಾಯ ವೇದಿಕೆಯ ರಾಜ್ಯಾಧ್ಯಕ್ಷರಾದ ಆರ್.ಕೆಂಪಣ್ಣ,  ಜಿಲ್ಲಾ ಸವಿತಾ ಅಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ  ಯೋಗೀಶ್ ಉಪ್ಪಾರ್, ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ಪ್ರೊ.ಕೆ.ಎಂ.ಜಯರಾಮಯ್ಯ, ಗಂಗಾಮತಸ್ಥ ಸಮಾಜದ ಗೌರವಾಧ್ಯಕ್ಷ ಡಾ.ವಸಂತಮ್ಮ ಹೀಗೆ ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರುಗಳು ಈ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

Key words: mysore-Meeting-KS Shivaramu