ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲು ಅಭ್ಯರ್ಥಿಗಳು ಐಟಿ ಮತ್ತು ಡಿಜಿಟಲ್ ಜ್ಞಾನ ಕರಗತ ಮಾಡಿಕೊಂಡಿರಬೇಕು- ಎಂ.ಎಸ್.ಮಹಾಬಲೇಶ್ವರ.

ಮೈಸೂರು,ಜುಲೈ,6,2021(www.justkannada.in): ದೇಶದಲ್ಲಿ ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚಾಗುತ್ತಿದೆ. ಡಿಜಿಟಲ್ ಕ್ರಾಂತಿ ಉಂಟಾಗುತ್ತಿರುವ ಹಿನ್ನೆಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲು ಆಪೇಕ್ಷೀಸುವ ಅಭ್ಯರ್ಥಿಗಳು ಐಟಿ ಮತ್ತು ಡಿಜಿಟಲ್ ಜ್ಞಾನವನ್ನು ಕರಗತ ಮಾಡಿಕೊಂಡಿರಬೇಕು ಎಂದು ಕರ್ಣಾಟಕ ಬ್ಯಾಂಕ್ ಎಂ.ಡಿ ಮತ್ತು ಸಿಇಒ ಎಂ.ಎಸ್.ಮಹಾಬಲೇಶ್ವರ ಹೇಳಿದರು.jk

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ದಿನಾಂಕ:೦5.೦7 2021  ರಂದು ಹಮ್ಮಿಕೊಂಡಿದ್ದ 50 ದಿನಗಳು ನಡೆದ ಬ್ಯಾಂಕಿಂಗ್‌ ಹುದ್ದೆಗಳ ನೇಮಕಾತಿ ಪರೀಕ್ಷಾ ಆನ್‌ಲೈನ್‌ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ವ್ಯವಸ್ಥೆ ಒಂದು ದೇಶದ ನರ ಮಂಡಲ ಇದ್ದಂತೆ ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚುತ್ತಿದೆ. ಜನ್‌ಧನ್, ಆಧಾರ್ ಮತ್ತು ಮೊಬೈಲ್ ಪರಿಣಾಮವಾಗಿ ಜನಜನಗಳಿಗೆ ಮನೆಗಳಿಗೆ ಬ್ಯಾಂಕ್ ವ್ಯವಸ್ಥೆ ತಲುಪಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೆ ಕಾರಣ ಆಗಿರುವುದು ಡಿಜಿಟಲ್ ಕ್ರಾಂತಿ, ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ಎನ್ನುವುದು ಜಾಸ್ತಿಯಾಗುತ್ತಿದೆ. ಬ್ಯಾಂಕ್‌ ಗಳು ಕಡಿಮೆಯಾಗಲಿದೆ. ಹೀಗಾಗಿ ಮುಂದೆ ಈ ಕ್ಷೇತ್ರಕ್ಕೆ ಬರುವವರು ಐಟಿ ಮತ್ತು ಡಿಜಿಟಲ್ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು. ಸಾಮಾನ್ಯ ದಿನ ಪತ್ರಿಕೆ ಓದುವ ಜೊತೆಗೆ ಬಿಸನೆಸ್ ಪತ್ರಿಕೆಗಳನ್ನು ಓದುವ ಹಾಗೂ ಆರ್‌ಬಿಐ ಕಾಲಕಾಲಕ್ಕೆ ಜಾರಿಗೆ ತರುವ ನೀತಿ ನಿಯಮಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯ ನೌಕರರಾಗಿ ಸೇರ್ಪಡೆಗೊಳ್ಳುವವರು ಪ್ರಮಾಣಿಕತೆ, ಪರಿಶ್ರಮದಿಂದ ಕರ್ತವ್ಯ ನಿರ್ವಹಿಸಿದರೆ, ಉನ್ನತ ಹುದ್ದೆ ಆಲಂಕರಿಸಬಹುದು. ಜ್ಞಾನದ ಹಸಿವು ಇರಬೇಕು. ಬಡ್ತಿಯ ಹಿಂದೆ ಹೋಗಬಾರದು, ಜ್ಞಾನದ ಹಿಂದೆ ಹೋಗಬೇಕು. ಅಂಥ ಪ್ರಜ್ಞಾ ಬೆಳೆಸಿಕೊಂಡಾಗ ಬಡ್ತಿಯೇ ನಿಮ್ಮ ಹಿಂದೆ ಬರುತ್ತದೆ. ಕರ್ಣಾಟಕ ಬ್ಯಾಂಕ್‌ನಲ್ಲಿ ಸಾಮಾನ್ಯ ಗುಮಾಸ್ತರಾಗಿ ಸೇರಿದ ವ್ಯಕ್ತಿಯೊಬ್ಬರು ಇಂದು ಅಧ್ಯಕ್ಷರಾಗಿ ನಿವೃತ್ತರಾಗಿದ್ದಾರೆ. ಕೃಷಿ ಅಧಿಕಾರಿಯಾಗಿ ಸೇರಿಕೊಂಡ ನಾನು ಈಗ ಎಂ.ಡಿ. ಸಿಇಒ ಆಗಿದ್ದೇನೆ. ಇಂಥ ವಿಫುಲ ಅವಕಾಶ ಬ್ಯಾಂಕಿಂಗ್ ಕ್ಷೇತ್ರದಲ್ಲಿದೆ ಎಂದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಪ್ರಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್‌ ನಲ್ಲಿ ಇಡುತ್ತಾರೆ. ಅದರ ರಕ್ಷಣೆ ಮತ್ತು ಹೊಣೆ ಬ್ಯಾಂಕ್ ಉದ್ಯೋಗಳಾಗಿರುತ್ತದೆ. ಹೀಗಾಗಿ ಪ್ರಮಾಣಿಕತೆ ಮತ್ತು ನಂಬಿಕೆ ಉಳಿಸಿಕೊಳ್ಳುವುದಕ್ಕೆ ಮೊದಲು ಪ್ರಾಶಸ್ತ್ಯ ಕೊಡಬೇಕು.

ಯಶಸ್ಸಿಗೆ ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಸತತವಾದ ಕಲಿಕೆ ಇರಬೇಕು, ಅಡ್ಡದಾರಿ ತುಳಿಯಬಾರದು. ರಾಜ ಮಾರ್ಗದಲ್ಲಿ ಸಾಗಬೇಕು. ಯಶಸ್ಸಿಗೆ ಸತತ ಕಲಿಕೆ ಹಾಗೂ ಕಠಿಣ ಅಧ್ಯಯನವೇ ಸೂತ್ರ. ಈಗ ತರಬೇತಿ ಪಡೆಯುತ್ತಿದ್ದೇವೆ ಎಂದು ಮೈಮರೆಯಬಾರದು. ಕಲಿಕೆ ಎನ್ನುವುದು ಸತತವಾಗಿರಬೇಕು. ಓದಿನ ಹಸಿವು ಮತ್ತು ಸಾಧಿಸುವ ಛಲ ಇರಬೇಕು. ಆಗ ಮಾತ್ರ ನಿಮ್ಮ ಯಶಸ್ಸಿನ ಪ್ರಯಾಣ ದಡ ಸೇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಉದ್ಯೋಗ ದೃಷ್ಟಿಸುವಲ್ಲಿ ಭಾರತೀಯ ಸೇನೆ, ಪ್ಯಾರಾ ಮಿಲಿಟರಿ ಮೊದಲನೇ ಸ್ಥಾನದಲ್ಲಿದೆ. ೨೬ ಲಕ್ಷ ಉದ್ಯೋಗ ಸೃಷ್ಟಿಸಿರುವ ಹೆಮ್ಮೆ ಭಾರತೀಯ ಸೇನೆಯದ್ದು, ಎರಡನೇ ಸ್ಥಾನದಲ್ಲಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ೧೪ ಲಕ್ಷ ಉದ್ಯೋಗಿಗಳಿದ್ದಾರೆ. ಪ್ರತಿ ವರ್ಷ 28 ಸಾವಿರದಿಂದ ಒಂದು ಲಕ್ಷದವರೆಗೆ ಹೊಸ ಉದ್ಯೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತೀಯ ರೈಲ್ವೆ ಇದೆ. ರೈಲ್ವೇ ೧೨ ಲಕ್ಷ ಉದ್ಯೋಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ. ಆನ್‌ಲೈನ್ ತರಬೇತಿ ಆಯೋಜಿಸಿರುವುದಕ್ಕೆ ಅಭಿನಂದನೆ.  ಕನ್ನಡದಲ್ಲಿ ತರಬೇತಿ ನೀಡುವ ಪ್ರಯತ್ನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಎಡಿಜಿಪಿ (ರೈಲ್ವೇಸ್) ಭಾಸ್ಕರ್‌ ರಾವ್ ಮಾತನಾಡಿ, ನಾವು ಸಿದ್ಧತೆ ನಡೆಸುವ ಕಾಲಕ್ಕೆ ಸರಿಯಾದ ಸಂಪನ್ಮೂಲ ಲಭ್ಯವಿರಲಿಲ್ಲ. ಈಗ ಆನ್‌ ಲೈನ್‌ನಿಂದ ಸಾಕಷ್ಟು ವ್ಯಾಸಂಗಕ್ಕೆ ಸಂಬಂಧಿಸಿದ ಸಂಪನ್ಮೂಲಗಳು ಲಭ್ಯವಿದೆ. ಸ್ವಯಂ ಅಧ್ಯಯನ ಮಾಡುತ್ತೇವೆ ಎನ್ನುವವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಆನ್‌ ಲೈನ್ ಜೊತೆಗೆ ಆಫ್ ಲೈನ್ ಕೋಚಿಂಗ್ ಮತ್ತು ತರಬೇತಿ ಅಗತ್ಯ. ಆದರೆ ಪೈಪೋಟಿಯೂ ಹಾಗೇ ಇರುತ್ತದೆ. ಹಾಗಾಗಿ ಹೆಚ್ಚು ಅಧ್ಯಯನ ಮಾಡಬೇಕು.

ಉದ್ಯೋಗ ಪಡೆಯಬೇಕೆಂಬ ಆಸೆ ಮತ್ತು ಆಸಕ್ತಿ ಇದ್ದರೆ ಸಾಲದು, ಅಗತ್ಯ ಸಿದ್ಧತೆಯೂ ಅಗತ್ಯ ಆಳ ಅಧ್ಯಯನ ಜೊತೆಗೆ ಫೋಕಸ್ ಆಗಿ ಓದಬೇಕು. ವಿದ್ಯಾರ್ಥಿಗಳು ಪಠ್ಯಕ್ರಮ ಹೊರತಾಗಿಯೂ ಅಧ್ಯಯನ ಮಾಡಿಕೊಂಡಿರಬೇಕು. ಸಾಹಿತ್ಯ ಇತಿಹಾಸ ಅಧ್ಯಯನ ಜೊತೆಗೆ ಲಾಜಿಕಲ್ ರೀಸ್ಟಿಂಗ್, ಮೆಂಟಲ್ ಎಬಿಲಿಟಿ ಮತ್ತು ಗಣಿತಕ್ಕೆ ಹೆಚ್ಚು ಗಮನ ಕೊಡಿ. ಪರೀಕ್ಷಾ ಕೊಠಡಿಯಲ್ಲಿ ಒತ್ತಡಕ್ಕೆ ಒಳಗಾಗಬೇಡಿ ಎಂದು ತರಬೇತಿ ಪಡೆದಿರುವವರಿಗೆ ಕಿವಿ ಮಾತು ಹೇಳಿದರು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೈಬರ್‌, ಕಾನೂನು ಸೇರಿದಂತೆ ಇನ್ನಿತರ ಕ್ಷೇತ್ರಗಳು ಸೇರ್ಪಡೆಗೊಳ್ಳುತ್ತಿವೆ. ಇದಕ್ಕೆ ಅನುಗುಣವಾಗಿ ಬ್ಯಾಂಕ್ ಉದ್ಯೋಗ ಆಕಾಂಕ್ಷಿಗಳು ಸಿದ್ಧರಾಗಬೇಕು ಎಂದರು.

ಯುವಕರು ಉದ್ಯೋಗ ಪಡೆದುಕೊಳ್ಳಲು ಉಪಯೋಗ ಆಗುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ತರಬೇತಿ ನೀಡುತ್ತಿರುವುದು ಶ್ಲಾಘನೀಯ, ಈ ಕಾರ್ಯಕ್ರಮದಡಿ ಎರಡು ಸಾವಿರ ಅಭ್ಯರ್ಥಿಗಳು ದಿನವಹಿ ಉಪಯೋಗ ಪಡೆದುಕೊಂಡಿರುವುದು ವಿಶ್ವವಿದ್ಯಾಲಯ ಹಾಗೂ ಕುಲಪತಿಗಳ ಕಾರ್ಯನಿರ್ವಹಣೆಗೆ ಹಿಡಿದ ಕನ್ನಡಿಯಾಗಿದೆ.

ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌ ಮಾತನಾಡಿ, ಇಡೀ ವಿಶ್ವವಿದ್ಯಾಲಯವನ್ನು ಡಿಜಿಟಲೀಕರಣ ಮಾಡಿದ್ದೇವೆ. ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಅನುಕೂಲ ಆಗುವಂತೆ ಕೋರ್ಸ್ ಪ್ರವೇಶದಿಂದ ಹಿಡಿದು ಪ್ರಮಾಣ ಪತ್ರ ಪಡೆದುಕೊಳ್ಳುವವರೆಗೆ ಡಿಜಿಟಲೀಕರಣ ಆಗಿದೆ ಎಂದರು. ನಮ್ಮ ವಿಶ್ವ ವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮುಂದಿನ ತರಬೇತಿ ಪಿ.ಯು ನಂತರದ ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಾಮಾನ್ಯ ಪರೀಕ್ಷೆಗೆ (ಕೆ-ಸಿಇಟಿ) ಆನ್‌ ಲೈನ್‌ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದರು.

ವಿಧುಷಿ ಶ್ರೀರಂಜಿನಿ ವಿವೇಕ್ ಪ್ರಾರ್ಥಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಇದ್ದರು.

Key words: mysore-KSOU- Candidates – digital knowledge -banking field-MS Mahabaleshwar.