Tuesday, September 15, 2026

BDA Apartments

ಸಾಧನೆಗೆ ಗುರಿ ಮುಖ್ಯ: ಇಂದಿನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪ...
Home Front Page ಸಾಧನೆಗೆ ಗುರಿ ಮುಖ್ಯ: ಇಂದಿನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ- ಎಸ್ಪಿ ಎನ್. ವಿಷ್ಣುವರ್ಧನ

ಸಾಧನೆಗೆ ಗುರಿ ಮುಖ್ಯ: ಇಂದಿನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ- ಎಸ್ಪಿ ಎನ್. ವಿಷ್ಣುವರ್ಧನ

ಮೈಸೂರು,ಜನವರಿ,29,2025 (www.justkannada.in):  ಸಾಧನೆಗೆ ಗುರಿ ಮುಖ್ಯ.  ಹೀಗಾಗಿ ಇಂದಿನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ. ಬಳಿಕ ಗುರಿಯ ಕಡೆ ನಿರಂತರ ಗಮನ ಹರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಸಾಧನೆಗೆ ಗುರಿ ಮುಖ್ಯ nypunya1

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹುದ್ದೆಗಿಂತಲೂ ಮಾನವೀಯ ಮೌಲ್ಯ ಮುಖ್ಯ. ಹೀಗಾಗಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ ಜೊತೆಗೆ ಶಿಸ್ತು, ಹಿರಿಯ ಮೇಲೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು ಆವಾಗಲೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ನಿಮ್ಮ ಬೌದ್ಧಿಕ ಬುದ್ಧಿ ಶಕ್ತಿ ಬಲವಾಗಿರುವುದರಿಂದ ಈ ನಿಟ್ಟಿನಲ್ಲಿ ನೀವು ಯಾವುದೇ ಹಾದಿಯನ್ನು ಸುಗಮವಾಗಿ ಸಾಧಿಸಬಹುದು. ಬ್ಯಾಂಕಿಂಗ್, ಯುಪಿಎಸ್ಸಿ, ಐಎಎಸ್ ಐಎಫ್ಎಸ್, ಕೆಎಎಸ್ ಸೇರಿದಂತೆ ಎಲ್ಲಾ ಪರೀಕ್ಷೆ ತೆಗೆದುಕೊಳ್ಳಿ ಪ್ರಯತ್ನಂ ಸರ್ವ ಸಾಧನಂ ಎನ್ನುವಂತೆ ಎಂದಾದರೂ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಶಾಲೆಯಿಂದಲೇ ನಾನು ಗುರಿ ನಿಗದಿಪಡಿಸಿಕೊಂಡಿದ್ದೆ. ಅಂದಿನಿಂದಲೇ ಸತತ ಪ್ರಯತ್ನಿಸಿದೆ. ನಮ್ಮ ತಂದೆ ಕೂಡ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಿದ್ದರು ಅವರೇ ನನಗೆ ಮಾದರಿ. ನಾನು ನನ್ನ ಗುರಿ ಕಡೆ ಗಮನ ಹರಿಸಿದೆ. ಪೊಲೀಸ್ ಇಲಾಖೆಗೆ ಸೇರಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು. ಹುದ್ದೆ ಸೇರಿದ ಮೇಲೆ ಪೋಷಕರನ್ನು ಮರೆಯಬಾರದು. ಸಾರ್ವಜನಿಕ ಸೇವೆಯೆ ನಮ್ಮ ಗುರಿ ಎನ್ನುವ ಅಂಶವನ್ನು ಮರೆಯಬಾರದು ಎಂದು ಹೇಳಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ಗಟ್ಟಿಕೊಳಿಸಿ ನಮ್ಮ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ. ಬಿ.ಪ್ರವೀಣ ಅವರು ಮಾತನಾಡಿ ಬ್ಯಾಂಕಿಂಗ್ ಹುದ್ದೆಗಳ ತರಬೇತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಗುರಿ ಸ್ಪಷ್ಟಪಡಿಸಿಕೊಂಡು ಆ ಹಾದಿಯತ್ತ ಗಮನ ಹರಿಸಬೇಕು. ನಿರಂತರ ಪರಿಶ್ರಮ ನಿಮ್ಮನ್ನು ಗೆಲುವಿನ ದಡ ಸೇರಿಸಲಿದೆ. ವಿದ್ಯಾರ್ಥಿಗಳಲ್ಲಿ ಛಲ ಮತ್ತು ಗುರಿಯಿರಬೇಕು. ಆ ಗುರಿ ದೊಡ್ಡದಾಗಿರಲಿ ಎಂದರು.

ತರಬೇತಿ ಪಡೆಯಲು ಬಂದಿರುವ ನಿಮಗೆ ವಿವಿಯು ಎಲ್ಲಾ ಸಹಕಾರ ನೀಡಲಿದೆ. ಇಲ್ಲಿರುವ ಗ್ರಂಥಾಲಯ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರ ನೆರೆವು ಪಡೆದುಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರದ ಡೀನ್ ಪ್ರೊ. ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿಗಳಾದ ಪ್ರೊ. ನಿರಂಜನ್ ರಾಜ್, ಸಂಯೋಜನಾಧಿಕಾರಿಗಳಾದ, ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ. ಜಿ ಕೊಪ್ಪಲ್. ಅವರು ಉಪಸ್ಥಿತರಿದ್ದರು.

Key words: Goals, important, success, mysore, KSOU, SP,  N. Vishnuvardhana