ಒತ್ತಡಕ್ಕೆ ಮಣಿದ ಸರಕಾರ ..! : ಜಮೀನು ಒತ್ತುವರಿ ತನಿಖೆಗೆ ತಂಡ ರಚಿಸಿದ್ದ ಆದೇಶ ಹಿಂದಕ್ಕೆ. ಡಿಸಿಗೆ ತನಿಖೆ ಹೊಣೆ.

Mysore-Karnataka-survey-land-encroachment-order-withdrawn

 

ಬೆಂಗಳೂರು, ಸೆ.09, 2021 : (www.justkannada.in news) : ಮೈಸೂರು ಜಿಲ್ಲೆ, ತಾಲೋಕು ಜಯಪುರ ಹೊಬಳಿ, ಕಸಬಾ ಹೋಬಳಿ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೊಕು ಬೆಳಗೊಳ ಗ್ರಾಮ ಹಾಗೂ ಕಸಬಾ ಹೋಬಳಿ ದಟ್ಟಗಳ್ಳಿ ಗ್ರಾಮದಲ್ಲಿನ ಸರಕಾರಿ ಜಮೀನು ಒತ್ತುವರಿ ಬಗ್ಗೆ ತನಿಖೆ ನಡೆಸಲು ನೇಮಕಗೊಳಿಸಿದ್ದ ತಂಡವನ್ನು ಸರಕಾರ ಹಿಂಪಡೆದುಕೊಂಡಿದೆ.

ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾಲಿಕತ್ವದ ‘ ಸಾರಾ ಚೌಟ್ರಿ’ ತೋಟದ ಜಾಗ ಸಹ ಸರ್ವೆ ವ್ಯಾಪ್ತಿಗೆ ಸೇರಿದ್ದು, ಶಾಸಕ ಮಹೇಶ್ ಸರ್ವೆ ಆಯುಕ್ತ ಮನಿಷ್ ಮೌದ್ಗಲ್ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಕಂದಾಯ ಭೂ ದಾಖಲೆ ಇಲಾಖೆ ಆಯುಕ್ತರು ರಚಿಸಿದ್ದ ತಂಡದ ಆದೇಶವನ್ನು ಸರಕಾರ ಹಿಂಪಡೆದು, ಹೊಸ ಆದೇಶ ಹೊರಡಿಸಿದೆ.

ಸರ್ವೆ ಆಯುಕ್ತರು ನೇಮಕಗೊಳಿಸಿದ್ದ ತಂಡದಿಂದ ಮೈಸೂರು – ಮಂಡ್ಯದಲ್ಲಿನ ಭೂ ಒತ್ತುವರಿ, ಭೂ ಕಬಳಿಕೆ ಸಮಗ್ರ ತನಿಖೆ ವಿಚಾರಣೆ ಸಾಧ್ಯವಿಲ್ಲ. ಈ ತಂಡದಿಂದ ಕೇವಲ ಜಮೀನು ಸಮೀಕ್ಷೆ ಮಾತ್ರ ಸಾಧ್ಯ. ಹೀಗಾಗಿ ಈ ತಂಡ ರದ್ದು ಮಾಡಿರುವುದಾಗಿ ಕಂದಾಯ ಇಲಾಖೆ ಉಪಕಾರ್ಯದರ್ಶಿ ಆದೇಶ.

ಈ ಹಿಂದೆ ಮಂಡ್ಯ, ತುಮಕೂರು, ದಾವಣಗೆರೆ ಭೂಇಲಾಖೆ ಅಧಿಕಾರಿಗಳ ತಂಡವನ್ನು ರಚನೆ ಮಾಡಿ, 10 ದಿನದೊಳಗೆ ವರದಿ ನೀಡುವಂತೆ ಕಂದಾಯ ಭೂ ಇಲಾಖೆ ಆಯುಕ್ತ ಮನಿಶ್ ಮುದ್ಗಲ್ ಆದೇಶಿಸಿದ್ದರು.

ಇದೀಗ, ಮೈಸೂರು – ಮಂಡ್ಯ ವ್ಯಾಪ್ತಿ ಸರಕಾರಿ ಭೂ ಒತ್ತುವರಿ ತನಿಖೆ ಆಯಾ ಜಿಲ್ಲಾಧಿಕಾರಿಗಳ ಹೆಗಲಿಗೆ. ತನಿಖೆ ನಡೆಸಲು ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆದೇಶ. ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಇತರೆ ಅಧಿಕಾರಿಗಳಿಗೆ ಕಾರ್ಯವನ್ನು ಹಸ್ತಾಂತರಿಸಕೂಡದು. ಮೂರು ವಾರದ ಒಳಗೆ ಕಡ್ಡಾಯವಾಗಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ತನಿಖಾಧಿಕಾರಿಯಾದ ಜಿಲ್ಲಾಧಿಕಾರಿಗಳೇ ತಮ್ಮದೆ ತಂಡ ರಚಿಸಿ ಸಮಗ್ರ ವಿಚಾರಣೆ ಮಾಡಬೇಕು ಎಂದು ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಎಂ.ಇ.ಚನ್ನಬಸವರಾಜು ಅವರು ಆದೇಶ ಮಾಡಿದ್ದಾರೆ.

key words : Mysore-Karnataka-survey-land-encroachment-order-withdrawn