ಕಲಿತ ಶಾಲೆ ಅಭಿವೃದ್ಧಿಗೆ 1 ಲಕ್ಷ ನಗದು ಕಂಪ್ಯೂಟರ್ ಕೊಡುಗೆ ನೀಡಿದ ಎಚ್. ಎನ್ ವೆಂಕಟೇಶ್

ಮೈಸೂರು,ಏಪ್ರಿಲ್,4,2026 (www.justkannada.in): ತಾವು ಕಲಿತ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹಿಂಡ್ಲುಗೂಡು ಶಾಲೆಗೆ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರಾದ ಎಚ್ ಎನ್ ವೆಂಕಟೇಶ್ ಒಂದು ಲಕ್ಷ ನಗದು ಕಂಪ್ಯೂಟರ್ ಹಾಗೂ ಕ್ರೀಡಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.

ಇದರ ಜೊತೆಗೆ ಲಾ ಗೈಡ್  ವತಿಯಿಂದ ಕಿರಂಗೂರು ಕ್ಲಸ್ಟರ್ ವ್ಯಾಪ್ತಿಯ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಾದ ಕಂಪ್ಯೂಟರ್‌ ಗಳನ್ನು ನೀಡಲಾಯಿತು. ಈ ಎಲ್ಲಾ ಸಲಕರಣೆಗಳನ್ನು ಹಿಂಡಗೂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಅಧಿಕಾರಿ ಡಾ ಪಿ ಶಿವರಾಜ್ ಮೂಲಕ ಹಸ್ತಾಂತರಿಸಲಾಯಿತು.

ಹಿಂಡಗೂಡ್ಲು ಸರ್ಕಾರಿ ಶಾಲೆ, ದಾಸನಪುರ ಸರ್ಕಾರಿ ಶಾಲೆ, ದೊಡ್ಡಹೇಜ್ಜೂರು ಸರ್ಕಾರಿ ಶಾಲೆ,  ಸರ್ಕಾರಿ ಪದವಿಪೂರ್ವೂ ಕಾಲೇಜುಗಳಿಗೆ ಕಂಪ್ಯೂಟರ್‌ ಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಅಪರ  ಜಿಲ್ಲಾ ಅಧಿಕಾರಿ ಶಿವರಾಜ್ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆ, ಹುಟ್ಟೂರು ಎಂದಿಗೂ ಮರೆಯಬಾರದು ಗ್ರಾಮದಲ್ಲಿ ಇದ್ದ ದೇವಾಲಯ ನಿರ್ಮಾಣ ಮಾಡಿರುವುದಲ್ಲದೇ ಅವರು ಕಲಿತ ಶಾಲೆಗೆ ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿಗಳನ್ನು ನೀಡುತ್ತಿರುವುದು ಸಂತೋಷ ತಂದಿದೆ. ಲಾ ಗೈಡ್ ಸಂಪಾದಕರು ಹಿರಿಯ ವಕೀಲ ವೆಂಕಟೇಶ್ ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ. ಅದಲ್ಲದೆ ಸರ್ಕಾರದಿಂದ 3.25ಕೋಟಿ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡಿರುವುದು ಸಹ ಹುಡುಗಾಟಿಕೆಯ ವಿಚಾರವಲ್ಲ. ಹುಟ್ಟು ಊರು ಅಭಿವೃದ್ಧಿ ಆಗಬೇಕು ಎಂಬ ಅವರ ಕನಸು ಈಡೇರಲಿ ಅದಕ್ಕೆ ಗ್ರಾಮಸ್ಥರು ಸಹಕರಿಸಿದ್ದಾರೆ, ಎಂದರು.

ಹಿರಿಯ ವಕೀಲಹರೀಶ್ ಕುಮಾರ್ ಹೆಗ್ಡೆ ಮಾತನಾಡಿ  ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂದರೆ, ಕೇವಲ ಪುಸ್ತಕಾಧಾರಿತ ಅಧ್ಯಯನವಲ್ಲ. ತಂತ್ರಜ್ಞಾನ ಜ್ಞಾನವೂ ಮಕ್ಕಳಿಗೆ ಸಮಾನವಾಗಿ ಅಗತ್ಯವಾಗಿದೆ. ಮಕ್ಕಳು ಭವಿಷ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ, ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಆಧಾರಿತ ಅಧ್ಯಯನವೇ ಅವಶ್ಯಕ’ ಎಂದರು. ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ತಲುಪಿಸುವುದೇ ಉದ್ದೇಶ ಎಂದು ತಿಳಿದು, ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಈ ಸೇವೆಯನ್ನು ಕೈಗೊಂಡಿರುವುದು ಮಾದರಿ ನಡೆಯಾಗಿದೆ’ ಎಂದು ಹೇಳಿದರು. ಆದ್ದರಿಂದ ಈ ಶಾಲೆಯ ಕ್ರೀಡಾ ಸಾಮಾಗ್ರಿಗಳನ್ನು ಕೊಳ್ಳಲು ವೈಯಕ್ತಿಕವಾಗಿ 51 ಸಾವಿರ ಶಾಲೆಗೆ ನೀಡುತ್ತೇನೆ ಎಂದು ಹೇಳಿದರು.

ಲಾ ಗೈಡ್ ಸಂಪಾದಕರು ಹಿರಿಯ ವಕೀಲ  ಎಚ್ ಎನ್ ವೆಂಕಟೇಶ್ ಮಾತನಾಡಿ, ನನ್ನ ತಂದೆ ಈ ಊರಿನಲ್ಲಿ ಹುಟ್ಟಿ ಶಿಕ್ಷಕರಾಗಿ ಹಲವು ಜನಗಳ ವಿದ್ಯಾರ್ಜನೆಗೆ ಕಾರಣರಾಗಿದ್ದಾರೆ. ಅಂತಹ ಕುಟುಂಬದಿಂದ ಬಂದ ನಾನು ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ಊರಿಗಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ಗ್ರಾಮಸ್ಥರು ಸಹ ಸಹಕಾರ ನೀಡುತ್ತಿರುವುದು ತುಂಬಾ ಸಂತೋಷ ಎಂದು ಹೇಳಿದರು. ಮುಂದೆ ಈ ಗ್ರಾಮವನ್ನು ವ್ಯಾಜ್ಯ ಮುಕ್ತ ಗ್ರಾಮ ಮಾಡುವುದೇ ನನ್ನ ಗುರಿ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಉದಯಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಶಿಕ್ಷಣ ಅಲ್ಲದೆ ಶಿಕ್ಷಣೇತರ ಕಾರ್ಯಕ್ರಮದಲ್ಲಿ ಬಹಳಷ್ಟು ಬಲಿಷ್ಠರಾಗಿದ್ದಾರೆ. ಶಿಕ್ಷಕರು ಅವರನ್ನು ಸರಿಯಾದ ದಾರಿಗೆ ತಂದು ತರಬೇತಿ ನೀಡಿದ್ದಲ್ಲಿ ಉತ್ತಮ ನಾಗರೀಕರಾಗಿ ಮಾಡಬಹುದು ಎಂದರು.

Key words: Mysore, H. N. Venkatesh, donated, computers, development, school