ಕೋಟ್ಯಾಂತರ ರೂ.ಮೌಲ್ಯದ “ತಿಮಿಂಗಲದ ವಾಂತಿ”: ಮೈಸೂರಿನ ಅರಣ್ಯ ಸಂಚಾರಿ ದಳದಿಂದ ಅಕ್ರಮ ಪತ್ತೆ

ಮೈಸೂರು, ಆಗಸ್ಟ್ 07, 2021 (www.justkannada.in): ಮೈಸೂರಿನ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ನಾಲ್ವರನ್ನು ಬಂಧಿಸಿ, 1 ಕಾರು, 3 ಮೊಬೈಲ್ ಸೇರಿದಂತೆ 8 ಕೆ.ಜಿ. ತೂಕದ ತಿಮಿಂಗಿಲದ ವಾಂತಿ ವಶಪಡಿಸಿಕೊಂಡಿರುವ ಅಪರೂಪದ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಸಮುದ್ರ ದಡದಲ್ಲಿ ಅಪರೂಪಕ್ಕೆ ಸಿಗುವ ಮೇಣದ ರೂಪದ ತಿಮಿಂಗಿಲದ ವಾಂತಿ ಪತ್ತೆಯಾಗಿದ್ದು ಮೈಸೂರು ಭಾಗದಲ್ಲಿ ಇದು ಮೊಟ್ಟ ಮೊದಲ ಪ್ರಕರಣವಾಗಿದೆ. ಇದುವರೆಗೆ ದೇಶದಲ್ಲಿಯೇ ೧೦ನೇ ಪ್ರಕರಣವಾಗಿದ್ದು,  ಮೈಸೂರು ಅರಣ್ಯ ಸಂಚಾರಿ ಸಿಬ್ಬಂದಿ ಚಾಕಚಕ್ಯತೆಯಿಂದ ಪತ್ತೆ ಹಚ್ಚುವ ಮೂಲಕ ತಮ್ಮ ಚಾಣಾಕ್ಷತನವನ್ನು ಪ್ರದರ್ಶಿಸಿ ದೇಶದ ಗಮನ ಸೆಳೆದಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಹೊದವಾಡ ಗ್ರಾಮದ ಕೆ.ಎ.ಇಬ್ರಾಹಿಂ  ಬಿನ್ ಲೇಟ್ ಕೆ.ಎ.ಅಹಮದ್, ಕುಶಾಲನಗರದ ೭ನೇ ಹೊಸಕೋಟೆಯ ೭ನೇ ರಸ್ತೆಯ ನಿವಾಸಿ ಬಿ.ಇ.ರಫೀಕ್, ಬಿ.ಎಂ.ಇಬ್ರಾಹಿಂ, ೭ನೇ ಹೊಸಕೋಟೆಯ ನಿವಾಸಿ ಎಂ.ಎ.ತಾಹಿರ್ ನಕಾಶ್ ಬಿನ್ ಲೇಟ್ ಮಹಮದ್ ಅಲಿ, ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಿಟಿ ತಾಲೂಕಿನ ಕುನ್ನುಪರಂಬೈಲ್  ನಿವಾಸಿ ಕೆ.ಎಂ.ಜಾರ್ಜ್ ಬಿನ್ ಮ್ಯಾಥ್ಯು ಎಂಬುವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಕೊಡಗು ಜಿಲ್ಲೆಯ ಕೊಯನಾಡು ನಿವಾಸಿ ರಿಯಾಸ್ ಬಿನ್ ಅಬೂಬಕರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ೮ಕೆ.ಜಿ. ೨೫೦ ಗ್ರಾಂ ತೂಕದ ತಿಮಿಂಗಿಲದ ವಾಂತಿ (ಅಂಬಗ್ರಿಸ್), ೧ ವ್ಯಾಗನರ್ (ಕೆಎ ೦೪, ಎಂ.ಡಿ.೮೪೬೨), ೩ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.  ತಿಮಿಂಗಿಲ ಮಾಡಿದ ವಾಂತಿಯು ಘನ ಮೇಣದ ವಸ್ತು ರೂಪದಲ್ಲಿರುತ್ತದೆ. ಇದನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಬ್, ಚೀನಾ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ತಿಮಿಂಗಿಲದ ವಾಂತಿಗೆ ಬಹು ಬೇಡಿಕೆ ಇದೆ. ಜೀರ್ಣವಾಗದ ವಸ್ತುವನ್ನು ತಿಮಿಂಗಿಲವು ಸುದೀರ್ಘ ಅವಧಿಯ ನಂತರ ವಾಂತಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ದುರಾಸೆಗೆ ಬಿದ್ದು, ಸಮುದ್ರದಲ್ಲಿ ತಟದಲ್ಲಿ ಸಿಕ್ಕಿದ್ದ ತಿಮಿಂಗಿಲದ ವಾಂತಿಯನ್ನು ಅಕ್ರಮವಾಗಿ ಹೊತ್ತೊಯ್ಯುತ್ತಿದ್ದಾಗ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳ ಬಲೆಗೆ ಬಿದ್ದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಕೊಡಗು ಜಿಲ್ಲೆಯ ಕುಶಾಲನಗರದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ವ್ಯಾಗನರ್ ಕಾರೊಂದು ಬಂದಿದೆ. ಅದನ್ನು ಪರಿಶೀಲಿಸಲು ತಡೆದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಬೆನ್ನತ್ತಿದ ೨೦ಕ್ಕೂ ಹೆಚ್ಚು ಮಂದಿ ಅರಣ್ಯ ಸಂಚಾರಿ ಸಿಬ್ಬಂದಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ  ತಿಮಿಂಗಿಲದ ವಾಂತಿ ಆರೋಪಿಗಳಿಗೆ ಎಲ್ಲಿ ಸಿಕ್ಕಿದೆ ಎಂದು ಪತ್ತೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಅರಣ್ಯ ಸಂಚಾರಿ ದಳದ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಮನೋಹರ ಸುವರ್ಣ, ಆರ್‌ಎಫ್‌ಓ ವಿವೇಕ್, ಡಿಆರ್‌ಎಫ್‌ಓಗಳಾದ ಲಕ್ಷ್ಮೀಶ, ಬಿ.ಎನ್.ಸುಂದರ್, ಡಿ.ಎಂ.ವಿನೋದ್ ಕುಮಾರ್, ಪ್ರಮೋದ, ನಾಗರಾಜು, ಟಿ.ಸಿ.ಸ್ನೇಹಾ, ಕೆ.ಜೆ.ಮೇಘನಾ, ಸಿಬ್ಬಂದಿಗಳಾದ ರವಿಕುಮಾರ್, ರವಿನಂದನ, ಗೋವಿಂದ, ಕೊಟ್ರೇಷ್ ಪೂಜಾರ, ಮಹಂತೇಶ್, ಚೆನ್ನಬಸವಯ್ಯ, ವಿರೂಪಾಕ್ಷ, ಶರಣಪ್ಪ, ವಾಹನ ಚಾಲಕರಾದ ಮಧು ಮತ್ತು ಪುಟ್ಟಸ್ವಾಮಿ ಉಪಸ್ಥಿತರಿದ್ದರು.