ಯಾರ ವಿರುದ್ಧವೂ ನಾನು ವರಿಷ್ಠರಿಗೆ ದೂರು ನೀಡಿಲ್ಲ : ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಸ್ಪಷ್ಟನೆ.

 

ಮೈಸೂರು, ಜೂ.19,2022 : (www.justkannada.in news) : ವಿಧಾನ ಪರಿಷತ್ ಚುನಾವಣೆಯಲ್ಲಿನ ಸೋಲಿಗೆ ಸಂಬಂಧಿಸಿದಂತೆ ಯಾರ ವಿರುದ್ಧವು ಪಕ್ಷದ ವರಿಷ್ಠರಿಗೆ ದೂರು ನೀಡಿಲ್ಲ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮೈ.ವಿ.ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಮೈ.ವಿ.ರವಿಶಂಕರ್ ಅವರು ಹೇಳಿದಿಷ್ಟು..

ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ನಮ್ಮ ಪಕ್ಷದ ಉತ್ಕೃಷ್ಠ ನಾಯಕರು. ಅವರು ಚುನಾವಣೆಯ ಪೂರ್ವ ಸಿದ್ಧತೆಯ ದಿನದಿಂದಲೂ ನನ್ನ ಗೆಲುವಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಇಂಥ ಮುಖಂಡರ ವಿರುದ್ಧ ನಾನು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇನೆ ಎಂಬುದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟ ಪಡಿಸಿದರು.
ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರ ಸೋಲಿಗೆ ಮುಖಂಡರ ಸಂಘಟಿತ ಪ್ರಚಾರ ಕಾರಣ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಒಕ್ಕಲಿಗ ಮತಗಳನ್ನು ಕ್ರೂಢೀಕರಿಸಲು ವಿಫಲವಾದರು ಎಂದು ವರಿಷ್ಠರಿಗೆ ರವಿಶಂಕರ್ ದೂರು ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಸ್ಟ್ ಕನ್ನಡದಲ್ಲಿ ವರದಿ ಪ್ರಕಟಿಸಲಾಗಿತ್ತು.

ಇದೀಗ, ಈ ವರದಿಗೆ ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್ ಅವರು ದೂರವಾಣಿ ಮೂಲಕ ಸ್ಪಷ್ಟನೆ ನೀಡಿ, ಇದು ವಾಸ್ತವಕ್ಕೆ ದೂರವಾದ ಸಂಗತಿ. ಈ ನಾಯಕರುಗಳ ವಿರುದ್ಧ ನಾನು ಯಾರಿಗೂ, ಯಾವುದೇ ದೂರನ್ನು ನೀಡಿಲ್ಲ ಎಂದಿದ್ದಾರೆ.

key words : mysore-election-bjp-mlc