ಮೈಸೂರು ದಸರಾ ಮಹೋತ್ಸವ: ಸೆ.29 ಮತ್ತು 30 ರಂದು ಮಕ್ಕಳ ದಸರಾ, ವಿವಿಧ ಕಾರ್ಯಕ್ರಮಗಳ ಆಯೋಜನೆ.

ಮೈಸೂರು,ಸೆಪ್ಟಂಬರ್,28,2022(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದ್ದು ಈ ಅಂಗವಾಗಿ ಹತ್ತಾರು ಕಾರ್ಯಕ್ರಮಗಳು ನಗರದಲ್ಲಿ ಜರುಗುತ್ತಿವೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ದಸರಾ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ.

ಸೆಪ್ಟಂಬರ್ 29(ನಾಳೆ) ಮತ್ತು ಸೆಪ್ಟಂಬರ್  30 ರಂದು  ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವತಿಯಿಂದ ಮಕ್ಕಳ ದಸರಾ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ನಾಳೆ ಬೆಳಿಗ್ಗೆ 11.30ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಮಕ್ಕಳ ದಸರಾ ಉದ್ಘಾಟಿಸಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉಪಸ್ಥಿತರಿರಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ-2022ರ ಅಧ್ಯಕ್ಷ ಸುನಂದರಾಜ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಮಕ್ಕಳ ದಸರಾ ಅಂಗವಾಗಿ ನಾಳೆ ಬೆಳಿಗ್ಗೆ 10 ಗಂಟೆಯಿಂದ 10.45ರವರೆಗೆ ಶ್ರೀಲಲಿತಾ ಸಂಗೀತ ಶಾಲಾ ಮಕ್ಕಳಿಂದ ಹಾಗೂ ಅತ್ರಿ ಕೌಶಿಕ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಕ್ಕಳ ದಸರಾದಲ್ಲಿ ವಿವಿಧ ವೇಷಭೂಷಣ ಸ್ಪರ್ಧೆಗಳು, ಪ್ರಬಂಧ ಮತ್ತು ಆಶುಭಾಷಣ ಸ್ಪರ್ಧೆಗಳು, ನೃತ್ಯ ಪ್ರದರ್ಶನ, ನಾಟಕ ಪ್ರದರ್ಶನ, ಮಾವುತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ, ದೇಸಿ ಆಟಗಳು ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

Key words: Mysore Dussehra- Children’s Dussehra – 29th – 30th– September,