ಮೈಸೂರು, ಸೆಪ್ಟಂಬರ್,8,2026 (www.justkannada.in): ಮೈಸೂರು ಮಹಾನಗರಪಾಲಿಕೆಯಲ್ಲಿ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುದಾನದಡಿ ಉಳಿದಿರುವ ಅನುದಾನದಲ್ಲಿ ವಸತಿ ಶಾಲೆಗಳಿಗೆ ಮೂಲಭೂತ ವಸ್ತುಗಳ ಖರೀದಿ, ಲ್ಯಾಪ್ ಟಾಪ್ ಖರೀದಿ, ಮನೆ ನಿರ್ಮಾಣ, ಸೈಕಲ ಖರೀದಿ ಸೇರಿದಂತೆ ವಿವಿಧ ಕೆಲಸಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಇಂದು ಡಾ: ಬಾಬು ಜಗಜೀವನರಾಂ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದರು. ಪರಿಶಿಷ್ಟ ಜಾತಿ ದೌರ್ಜನ್ಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದಾಗ ದೂರು ಸ್ವೀಕರಿಸಿ ಅನಂತರ ಜಾರಿ ನಿರ್ದೇಶನಾಲಯ ಕ್ಕೆ ವರ್ಗಾಯಿಸಬೇಕು. ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಬಂದಾಗ ಜಾರಿ ನಿರ್ದೇಶನಾಲಯಕ್ಕೆ ನೇರವಾಗಿ ಸಲ್ಲಿಸಿ ಎಂದು ಹೇಳುವಂತಿಲ್ಲ ಎಂದು ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ ಎಂದು ಬೇರೆಯವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಪಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯ ಜವರಪ್ಪ ಎಂದಾಗ ಡಿಸಿ ಲಕ್ಷ್ಮೀಕಾಂತರೆಡ್ಡಿ ಅವರು, ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನೇಮಾಕಾತಿ ಪ್ರಾಧಿಕಾರದವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೆ ನಂತರ ಪರಿಶೀಲಿಸಿ ವರದಿ ನೀಡುವುದು ಸರಿಯಾದ ಕ್ರಮವಾಗಿರುತ್ತದೆ ಎಂದರು.
ಪರಿಶಿಷ್ಟ ಜಾತಿ ಎಂದು ಬೇರೆಯವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಪಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯ ಜವರಪ್ಪ ಅವರು ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನೇಮಾಕಾತಿ ಪ್ರಾಧಿಕಾರದವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಬೇಕು ನಂತರ ಪರಿಶೀಲಿಸಿ ವರದಿ ನೀಡುವುದು ಸರಿಯಾದ ಕ್ರಮವಾಗಿರುತ್ತದೆ ಎಂದರು.
ಮೈಸೂರು ತಾಲ್ಲೂಕಿನ ನಾಡನಹಳ್ಳಿ ಗ್ರಾಮದ ಬಳಿ ಇರುವ ಟಿ.ನರಸಿಪುರ ಮುಖ್ಯ ರಸ್ತೆಯ ವೃತ್ತಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಿ ನಂತರ ಕ್ರಮ ಕೈಗೊಳ್ಳಿ ಎಂದರು.
ಹುಣಸೂರು ತಾಲ್ಲೂಕಿನ ಚಿಕ್ಕಹುಣಸೂರು ಗ್ರಾಮದ ಬಾಚಳ್ಳಿ ಗ್ರಾಮದ ಡಾ: ಬಿ.ಆರ್.ಅಂಬೇಡ್ಕರ್ ನಗರದ 30 ಕುಟುಂಬದವರಿಗೆ ಗಿರಿಜನ ಕಲ್ಯಾಣ ಇಲಾಖೆಯಿಂದ ಆದಿವಾಸಿಗಳು ಎಂದು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 30 ಕುಟುಂಬದವರ ಆದಿವಾಸಿ ಜೇನುಕುರುಬ ಜಾತಿಗೆ ಸೇರಿದವರಲ್ಲ ಎಂದು ದೂರು ದಾಖಲಾಗಿದ್ದು, ಜಾತಿ ಪ್ರಮಾಣ ಪತ್ರ ರದ್ದು ಆಗುವವರೆಗೂ ಪೌಷ್ಠಿಕ ಆಹಾರ ನೀಡುವಂತೆ ತಿಳಿಸಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಜಾತಿ ಪ್ತಮಾಣ ಪತ್ರ ನೀಡಲು ತಡವಾಗುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಚರ್ಚಿಸಿದ ಸಂದರ್ಭದಲ್ಲಿ ಸಣ್ಣ ಪುಟ್ಟ ತೊಂದರೆಗಳನ್ನು ಸರಿಪಡಿಸಿ ಜಾತಿ ಪ್ರಮಾಣ ಪತ್ರ ನೀಡಲು ವೇಗ ನೀಡಲಾಗುವುದು ಎಂದರು.
ಪಿರಿಯಾಪಟ್ಟಣ ತಾಲ್ಲೂಕಿನ ರಾಣಿ ಗೇಟ್ ಹಾಡಿಯಲ್ಲಿ ಜೇನು ಕುರುಬರಿಗೆ ಮನೆಗಳಿಗೆ ನಿರ್ಮಾಣ ಮಾಡಿಕೊಡಲು ತಡವಾಗುತ್ತಿದೆ ಎಂದು ಸಮಿತಿ ಸದಸ್ಯ ಜವರಪ್ಪ ಅವರು ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಅನುದಾನ ಬಿಡುಗಡೆ ಯಾಗಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಹಾಡಿ ಅವರಿಗೆ ಮನೆ ನಿರ್ಮಾಣ ಮಾಡಿಕೊಡುವಂತೆ ತಿಳಿಸಿದರು.
ಸಹಕಾರ ಸಂಘಗಳಲ್ಲಿ ಅರ್ಹರಿಗೆ ಸದಸ್ಯತ್ವ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಅವರಿಗೆ ಸದಸ್ಯತ್ವ ನೊಂದಣಿ ನೀಡುತ್ತಿಲ್ಲ ಎಂದು ಸಮಿತಿ ಸದಸ್ಯ ಜವರಪ್ಪ ಅವರು ಸಭೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು, ಸಹಕಾರ ಸಂಘದ ಅಧಿಕಾರಿಗಳು ಪರಿಶೀಲನೆ ನಡೆಸಿ ಅವರಿಗೆ ಸದಸ್ಯತ್ವ ಒದಗಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಎನ್.ಟಿ ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಎಸ್.ಬಸವರಾಜು, ಮಹದೇವ ಎನ್.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತೆ ಡಾ. ಹರ್ಷ ಪ್ರಿಯಂವದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಮಲ್ಲಿಕ್,ಅಪರ ಪೊಲೀಸ್ ಅಧೀಕ್ಷಕ ಎಲ್ ನಾಗೇಶ್, ಮಹಾನಗರ ಪಾಲಿಕೆಯ ಆಯುಕ್ತೆ ಎಂ. ಕೆ. ಸವಿತಾ ಹಾಗೂ ಹೆಚ್ಚುವರಿ ಆಯುಕ್ತೆ ವೀಣಾ, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರು ಬಿ. ರಂಗೇಗೌಡ,ಉಪ ವಿಭಾಗಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Key words: plan, SCSP, TSP, grants, Mysore DC, Laxmikantha Reddy






