ಮೈಸೂರು,ಫೆಬ್ರವರಿ,19,2026 (www.justkannada.in): ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕೂಡಲೇ ತೆರವುಗೊಳಿಸುವಂತೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸಂಘ ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಬೇಕಾದ್ದಲ್ಲಿ ಸಂಬಂಧಿಸಿದ ಪ್ರದೇಶದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗದಂತೆ ನಿಗದಿತ ಅವಧಿ ಮುಕ್ತಾಯ ನಂತರ ತೆರವುಗೊಳಿಸಬೇಕಾಗುತ್ತದೆ. ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿರುವುದು ಜಿಲ್ಲೆಯ ಪಾರಂಪಾರಿಕತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.
ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) (ತಿದ್ದುಪಡಿ) ಅಧಿನಿಯಮ 2020 ರನ್ವಯ ಕಾಯ್ದೆಯ ಕಲಂ 3 ರನ್ವಯ ಜಾಹೀರಾತುಗಳ ಮೂಲಕ ಅನಧಿಕೃತವಾಗಿ ವಿರೂಪಗೊಳಿಸುವುದಕ್ಕೆ ಗರಿಷ್ಠ 6 ತಿಂಗಳುಗಳ ಸೆರೆವಾಸದ ದಂಡನೆ ಅಥವಾ ಗರಿಷ್ಠ ಒಂದು ಸಾವಿರ ರೂಗಳವರೆಗೆ ದಂಡ ವಸೂಲಾತಿ ಅಥವಾ ಎರಡು ವಿಧವಾದ ದಂಡನೆ ವಿಧಿಸಲು ಅವಕಾಶವಿದೆ.
ಕರ್ನಾಟಕ ಮುನ್ಸಿಪಲ್ ಆಕ್ಟ್ 1964ರ ಕಲಂ 133 ಹಾಗೂ 136 ರಲ್ಲಿ ಕ್ರಮವಾಗಿ ಜಾಹೀರಾತು ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಬಗ್ಗೆ ಸ್ಪಷ್ಟವಾದ ಆದೇಶವಿರುತ್ತದೆ. ಆದ್ದರಿಂದ ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು, ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲು ಅನುಮತಿ ನೀಡುವಾಗ ಕಾರ್ಯಕ್ರಮಗಳ ನಿಗದಿತ ಅವಧಿಗೆ ಮಾತ್ರ ಸೀಮಿತಗೊಳಿಸಿ, ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಸಂಬoಧಪಟ್ಟವರೇ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಸೂಚಿಸಿದ್ದಾರೆ.
ಒಂದು ವೇಳೆ ತೆರವುಗೊಳಿಸದಿದ್ದರೇ ಸಂಬಂಧಪಟ್ಟವರ ಮೇಲೆ Karnataka open places (prevention of disfigurement) act 1981 ಹಾಗೂ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ 1964 ಕಾಯ್ದೆಗಳನ್ವಯ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Key words: Mysore DC, orders, removal, flexes, banners







