ಗ್ರಾಮೀಣ ದಸರಾ : ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಮಹಿಳೆಯರು ಮತ್ತು ಪುರುಷರು….

ಮೈಸೂರು,ಸೆ,26,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ  ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ದಸರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ದಸರಾದ ಸಂಭ್ರಮ ಪ್ರಾರಂಭವಾಗಿದೆ.

ಗ್ರಾಮೀಣ ಮತ್ತು ರೈತ ದಸರಾ ಕ್ರೀಡಾಕೂಟಕ್ಕೆ ಮೈಸೂರಿನ ವರುಣ ಗ್ರಾಮದಲ್ಲಿ  ಚಾಲನೆ ನೀಡಲಾಯಿತು. ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡು ಸಂಭ್ರಮಿಸಿದರು. 25 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗಾಗಿ  ರೈತ ದಸರಾ ಮತ್ತು ಗ್ರಾಮೀಣ ದಸರಾ ಆಯೋಜನೆ ಮಾಡಲಾಗಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೆ ಐದು ತರಹದ ಆಟಗಳನ್ನ ನಡೆಸಲಾಗಿತ್ತು. ಮಹಿಳೆಯರಿಗೆ ತಲೆ ಮೇಲೆ ಮಡಿಕೆ ಇಟ್ಟುಕೊಂಡು ಓಡುವ ಸ್ಪರ್ಧೆ, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ‌ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು, ನೀರು ತುಂಬಿದ ಮೂರು ಮಡಿಕೆ ಹೊತ್ತು ನಡೆಯುವ ಸ್ಪರ್ಧೆ ಹಾಗೂ ಒಂಟಿ‌ಕಾಲಿನ ಓಟ ಆಯೋಜನೆ ಮಾಡಲಾಗಿತ್ತು.

ಹಾಗೆಯೇ ಪುರುಷರಿಗೆ ಕೇಸರು ಗದ್ದೆ ಓಟ, ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ ಹಾಗೂ ಗುಂಡು ಎತ್ತುವ ಸ್ಪರ್ಧೆ ಮುಂತಾದ  ಕ್ರೀಡೆಗಳು ನಡೆದವು. ಗ್ರಾಮೀಣ ದಸರಾದ  ಕ್ರೀಡಾಕೂಟದಲ್ಲಿ  ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡು ರಂಜಿಸಿದರು.

Key words: mysore dasara- Beginning -rural dasara– various- sports.