ಜಂಬೂಸವಾರಿ ನೋಡಲು ಮರ ಏರಿದ್ದ ಜನರು : ಭಾರ ತಾಳದೆ ರೆಂಬೆ ತುಂಡಾಗಿ ಬಿದ್ದು ವ್ಯಕ್ತಿಗೆ ಗಾಯ.

 

ಮೈಸೂರು, ಅ.08, 2019 : ( www.justkannada.in news ) ದಸರ ಜಂಬೂಸವಾರಿ ಮೆರವಣಿಗೆ ವೇಳೆ ಇಲ್ಲಿನ ಮರದ ರೆಂಬೆ ತುಂಡಾಗಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಜಂಬೂಸವಾರಿ ವೀಕ್ಷಿಸುವ ವೇಳೆ ಈ ಘಟನೆ ನಡೆದಿದೆ. ಜಂಬೂಸವಾರಿ ನೋಡಲು ಜನರು ಏರಿದ್ದ ಮರದ ರೆಂಬೆಯು ತುಂಡಾಗಿ ಬಿತ್ತು. ಆಗ ಮರದ ಕೆಳಗಡೆ ಇದ್ದ ಪ್ರಕಾಶ್ ಎಂಬುವವರು ಗಂಭೀರ ಗಾಯಗೊಂಡರು.
ಮೈಸೂರು ತಾಲೊಕು ಉದ್ಬೂರಿನಿಂದ ಪುತ್ರಿಯೊಂದಿಗೆ ದಸರ ಮೆರವಣಿಗೆ ನೋಡಲು ಪ್ರಕಾಶ್ ಬಂದಿದ್ದರು. ಲಯನ್ಸ್ ಸಂಸ್ಥೆಯವರು ಹಾಕಿದ್ದ ಶಾಮಿಯಾನದ ಕೆಳಗೆ ಪ್ರಕಾಶ್ ಕುಳಿತಿದ್ದರು. ಈ ವೇಳೆ ಭಾರ ತಾಳಲಾರದೇ ರೆಂಬೆಯು ಮುರಿಯುತ್ತಿದ್ದಂತೆ ಮೇಲೇರಿದ್ದ ಯುವಕರು ಕೆಳಗೆ ಹಾರಿ ಪಾರಾದರು. ಆದರೆ ಮರದ ರೆಂಬೆ ಶಾಮಿಯಾನದ ಮೇಲೆ ಬಿದ್ದು ಈ ಅನಾಹುತ ಸಂಭವಿಸಿತು.

ಘಟನೆಯಿಂದ ಪ್ರಕಾಶ್ ಅವರ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು ಅವರನ್ನು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದರು. ತಂದೆ ಗಾಯಗೊಂಡಿರುವುದನ್ನು ಕಂಡ ಪುತ್ರಿಯ ರೋದನ ಮುಗಿಲುಮುಟ್ಟಿತ್ತು.

————

key words : mysore-dasara.2019-jamboosavari-tree-trunk-broken-man-injured