ಮೈಸೂರು, ಸೆಪ್ಟಂಬರ್,23, 2025 (www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶ(ಇನ್ ಫೋಸಿಸ್ ಕ್ಯಾಂಪಸ್ ಹತ್ತಿರ)ದಲ್ಲಿನ ಎಂಜಿಎಸ್(ಎಂ.ಗೋಪಿನಾಥ್ ಶೆಣೈ) ವಿಂಟೇಜಸ್ ನಲ್ಲಿ ಸೆ.26ರವರೆಗೆ ಐದು ದಿನಗಳ ಕಾಲ ಹಮ್ಮಿಕೊಂಡಿರುವ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, 1967ರ ಮರ್ಸಿಡಿಸ್ ಬೆಂಜ್ 230 ಎಸ್ ಹಾಗೂ 1932ರ ಎಂಜಿ ಮಾರಿಸ್ ಕಾರಿನಲ್ಲಿ ಕುಳಿತು ಸುತ್ತು ಹಾಕುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅರುಣ್ ಯೋಗಿರಾಜ್ ಅವರು, ಮೈಸೂರಿಗರು ಹಾಗೂ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ತಮ್ಮ ನೆಚ್ಚಿನ ಹಳೆ ಕಾರುಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಅಪರೂಪದ ಆಕರ್ಷಕ ಹಳೆ ಕಾರುಗಳನ್ನು ನೋಡಬಹುದಾಗಿದ್ದು, ಸಂಗ್ರಹ ಮಾಡಿರುವುದು ಅತ್ಯಂತ ಶ್ಲಾಘನೀಯ. ಇಂದಿಗೂ ಇಲ್ಲಿರುವ ಕಾರುಗಳ ನಿರ್ವಹಣೆ ಅಚ್ಚುಕಟ್ಟಾಗಿದ್ದು, ರೈಡ್ ಮಾಡಲು ರೆಡಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಕೈಗಾರಿಕೋದ್ಯಮಿ ಎಂ.ಗೋಪಿನಾಥ್ ಶೆಣೈ ಮಾತನಾಡಿ, ದಸರಾ ಅಂಗವಾಗಿ ಕಳೆದ ನಾಲ್ಕು ವರ್ಷಗಳಿಂದ ವಿಂಟೇಜ್ ಕಾರುಗಳ ರ್ಯಾಲಿ ನಡೆಸಲಾಗುತ್ತಿತ್ತು. ರ್ಯಾಲಿ ವೇಳೆ ಸಾಕಷ್ಟು ಜನರಿಗೆ ವಿಂಟೇಜ್ ಕಾರುಗಳನ್ನು ನೋಡುವ ಅವಕಾಶ ದೊರೆಯುತ್ತಿರಲಿಲ್ಲ. ಹಾಗಾಗಿ ಈ ವರ್ಷ ಐದು ದಿನಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ. 1909 ರಿಂದ 1970 ರವರೆಗಿನ ಸುಮಾರು 50ಕ್ಕೂ ಹೆಚ್ಚು ಅಪರೂಪದ ವಿಂಟೇಜ್ ಕಾರುಗಳು ಹಾಗೂ 40ಕ್ಕೂ ಹೆಚ್ಚು ಬೈಕ್ ಗಳು ಇದ್ದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಗಿದೆ ಎಂದರು.
ಸಾವಿತ್ರಿ ಗೋಪಿನಾಥ್ ಶೆಣೈ, ಉದ್ಯಮಿ ಮಾದವ ಶೆಣೈ, ವಿಜಯ ಯೋಗಿರಾಜ್, ಬಿಜೆಪಿ ಮುಖಂಡ ಹೆಚ್.ಜಿ.ಗಿರಿಧರ್, ಸತ್ಯನಾರಾಯಣ ಭಟ್, ಶಿವಕುಮಾರ್, ಮಾಧವ ಪೈ, ಎನ್.ರವಿ, ಅನಿಲ್, ಬಿಜೆಪಿ ಮುಖಡರಾದ ಕೇಬಲ್ ಮಹೇಶ್, ಜೋಗಿ ಮಂಜು, ಸುರೇಶ್ ನಾಯಕ್ ಮತ್ತಿತರರಿದ್ದರು.
Key words; Mysore Dasara, Vintage, classic cars, exhibition